ಉಡುಪಿ, ಆ. 12 (DaijiworldNews/MB) : ತಮ್ಮ ಪುಂಡಾಟದ ಮೂಲಕ ಸಮಾಜದ ಸ್ವಾಥ್ಯ ಹದಗೆಡಿಸಲು ಹಲವು ಪ್ರಯತ್ನಗಳು ನಡೆದಿದ್ದು ನಿಯಂತ್ರಣ ಸಂಪೂರ್ಣ ತಪ್ಪಿದ ಸಂದರ್ಭದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮನಸೋಇಚ್ಛೆ ವರ್ತಿಸಿದಾಗ ಕೊನೆಯ ಅಸ್ತ್ರವಾಗಿ ಗೋಲಿಬಾರ್ ಮಾಡಲಾಗಿದ್ದು ಮೂವರು ಸಾವನ್ನಪ್ಪಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ತಿಳಿಸಿದ್ದಾರೆ.

ಉಡುಪಿಯ ಉಸ್ತುವಾರಿ ಸಚಿವರು ಆಗಿರುವ ಬೊಮ್ಮಾಯಿಯವರು ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿದ್ದು ಬುಧವಾರ ಮಂಗಳೂರಿನಲ್ಲಿ ನಿಗದಿ ಪಡಿಸಿದ ಕಾರ್ಯಕ್ರಮಗಳನ್ನು ರದ್ದು ಮಾಡಿ ಬೆಂಗಳೂರಿಗೆ ತೆರಳಲಿದ್ದಾರೆ.
''ಈ ಪುಂಡರ ಕಲ್ಲುತೂರಾಟದಿಂದಾಗಿ ಪೊಲೀಸರಿಗೂ ಗಾಯಗಳಾಗಿವೆ. ಓರ್ವ ಪೊಲೀಸ್ಗೆ ತಲೆಗೆ ಗಂಭೀರ ಗಾಯವಾಗಿದೆ. ಈಗಾಗಲೇ 110 ಜನ ಬಂಧನವಾಗಿದ್ದು ಇನ್ನಷ್ಟು ಮಂದಿಯನ್ನು ಬಂಧಿಸಲಾಗುತ್ತದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ'' ಎಂದು ಹೇಳಿದ್ದಾರೆ.
''ಇನ್ನು ಸಿಸಿ ಕ್ಯಾಮರ ದಾಖಲೆ ಪೊಲೀಸ್ ಠಾಣೆಯ ದಾಖಲೆ ಸಂಗ್ರಹಿಸುತ್ತೇವೆ. ಪುಂಡಾಟಿಕೆ ಮುಂಚೂಣಿಯಲ್ಲಿದ್ದವರ ಮಾಹಿತಿಯೂ ಕೂಡಾ ಸಂಗ್ರಹವಾಗುತ್ತಿದೆ. ಈ ಬಗ್ಗೆ ಫೇಸ್ಬುಕ್ನಲ್ಲಿ ಚರ್ಚಿಸಿ ಗಲಭೆಗೆ ಕರೆ ಕೊಟ್ಟಿದ್ದಾರೆ. ಇದೊಂದು ಪೂರ್ವ ನಿಯೋಜಿತ ಷಡ್ಯಂತ್ರ. ಸ್ಥಳೀಯರು ಪ್ಲಾನ್ ಮಾಡಿ ಈ ಕೃತ್ಯ ಎಸಗಿದ್ದಾರೆ. ಇದು ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನ. ರಾಜ್ಯ ಶಾಂತವಾಗಿದ್ದು ಇದನ್ನು ಸಹಿಸದ ಸಮಾಜಘಾತಕ ಶಕ್ತಿಗಳು ಸಂದರ್ಭದ ಉಪಯೋಗ ಮಾಡಿದ್ದಾರೆ'' ಎಂದು ಆರೋಪಿಸಿದ್ದಾರೆ.
''ಸರ್ಕಾರವು ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರಥಮ ಆದ್ಯತೆ ನೀಡುತ್ತದೆ. ಗಲಭೆ ನಡೆದ ಹಿನ್ನೆಲೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡುತ್ತಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಗೃಹ ಕಾರ್ಯದರ್ಶಿ ನಿರಂತರ ಸಂಪರ್ಕದಲ್ಲಿದ್ದೇನೆ. ಆರು ಕಂಪನಿ ಸಿಆರ್ಪಿಎಫ್ ಯೋಧರನ್ನು ಕರೆಸಲಾಗುತ್ತಿದೆ. ಮೂರು ಹೈದರಾಬಾದಿನಿಂದ ಹಾಗೂ ಮೂರು ಚೆನ್ನೈನಿಂದ ಕರೆಸಲಾಗುತ್ತಿದೆ. ಆರು ಕಂಪನಿಗಳನ್ನು ಎಲ್ಲಿ ನಿಯೋಜಿಸಬೇಕು ಎನ್ನುವುದನ್ನು ಪೊಲೀಸ್ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ರ್ಯಾಪಿಡ್ ಆಕ್ಷನ್ ಫೋಸ್ಟ್ ಕರೆಸಲಾಗುತ್ತಿದೆ. ಗರುಡ ಫೋರ್ಸ್ ಕೂಡ ಸ್ಥಳದಲ್ಲಿದೆ. ಎರಡೂ ಪ್ರದೇಶ ಸಂಪೂರ್ಣ ಪೊಲೀಸರ ಹತೋಟಿಯಲ್ಲಿದೆ'' ಎಂದು ತಿಳಿಸಿದ್ದಾರೆ.
''ಹಾಗೆಯೇ ಪುಂಡರ ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ತನಿಖೆ ನಡೆಸಲಾಗುವುದು. ಸಿಎಂ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಮಧ್ಯಾಹ್ನ ಸಿಎಂ ಮತ್ತು ಹಿರಿಯ ಅಧಿಕಾರಿ ಜೊತೆ ಇನ್ನೊಂದು ಬಾರಿ ಚರ್ಚೆ ನಡೆಸಲಾಗುವುದು'' ಎಂದು ಹೇಳಿದ್ದಾರೆ.