ಮಲ್ಪೆ, ಆ 12 (DaijiworldNews/PY): ಕಾಲು ಜಾರಿ ಹೊಳೆ ನೀರಿಗೆ ಬಿದ್ದ ವ್ಯಕ್ತಿಯ ಮೃತದೇಹವು ಕೋಡಿ ಬೇಂಗ್ರೆಯ ಸ್ಮಶಾನದ ಬಳಿ ಸಮುದ್ರ ಕಿನಾರೆಯಲ್ಲಿ ಆ.11ರ ಮಂಗಳವಾರದಂದು ಪತ್ತೆಯಾಗಿದೆ.

ಸಾಂದರ್ಭಿಕ ಚಿತ್ರ
ಪತ್ತೆಯಾದ ಮೃತದೇಹವು ಸುಧಾಮ ಸುವರ್ಣ (65) ಎಂಬವರದ್ದಾಗಿದೆ ಎಂದು ತಿಳಿದುಬಂದಿದೆ.
ಕೋಡಿ ಬೇಂಗ್ರೆಯ ಸ್ಮಶಾನದ ಬಳಿ ಸಮುದ್ರ ಕಿನಾರೆಯಲ್ಲಿ ಗಂಡಸಿನ ಮೃತ ಶರೀರವು ಇರುವುದಾಗಿ ಕಲ್ಯಾಣಪುರ ಮೂಡುಕುದ್ರುವಿನ ಕುಲಾ ನಿವಾಸಿ ಸುನಿಲ್ ಪೂಜಾರಿ (47) ಇವರ ಪರಿಚಯದ ಕೋಡಿ ಬೇಂಗ್ರೆಯ ಸಂದೇಶ್ ಅವರು ತಿಳಿಸಿದ ಮೇರೆಗೆ ಇವರು ಕೂಡಲೇ ಸ್ಥಳಕ್ಕೆ ಹೋಗಿ ನೋಡಿದ್ದು, ಮೃತದೇಹವು, ಸುನಿಲ್ ಪೂಜಾರಿ ಅವರ ಮಾವ ಸುಧಾಮ ಸುವರ್ಣ (65) ಎಂಬವರದಾಗಿತ್ತು ಎಂದು ತಿಳಿದುಬಂದಿದೆ.
ಸುಧಾಮ ಸುವರ್ಣ ಅವರು ಕಾಣೆಯಾದ ಬಗ್ಗೆ ಈಗಾಗಲೇ ಆ.10ರಂದು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುಧಾಮ ಅವರಿಗೆ ಹೊಳೆಯ ಬದಿಯಲ್ಲಿ ತೆಂಗಿನಕಾಯಿ ಹೆಕ್ಕುವ ಅಭ್ಯಾಸವಿದ್ದು, ಅದರಂತೆ ಆ.8ರಂದು ರಾತ್ರಿ 10:00 ಗಂಟೆಯಿಂದ ಆ.9ರಂದು ಬೆಳಿಗ್ಗೆ 6:00 ಗಂಟೆಯ ಮಧ್ಯಾವಧಿಯಲ್ಲಿ ತೋಟದಲ್ಲಿದ್ದ ತೆಂಗಿನಕಾಯಿ ಹೆಕ್ಕಲು ಹೋಗಿ ಆ ಸಮಯ ವಿಪರೀತ ಮಳೆ ಇದ್ದು, ನೆರೆ ಪ್ರವಾಹವುಂಟಾಗಿ ಸುನಿಲ್ ಅವರ ಮಾವ ಆಕಸ್ಮಿಕವಾಗಿ ಕಾಲು ಜಾರಿ ಹೊಳೆ ನೀರಿಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರಬಹುದು ಎನ್ನಲಾಗಿದೆ.
ಘಟನೆಯ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.