ಮಂಗಳೂರು, ಏ 25: ಏಪ್ರಿಲ್ 27 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ , ಜಿಲ್ಲೆಗೆ ಆಗಮಿಸುತ್ತಿದ್ದು, ಅಂದು ನನ್ನ ಬೇಡಿಕೆಯನ್ನು ಈಡೇರಿಸದಿದ್ದರೆ, ಕಾಂಗ್ರೆಸ್ ನ "ಸ್ಥಳೀಯ ಮುಖಂಡರ ಜಾತಕ ಬಿಡಿಸುತ್ತೇನೆ" ಎಂದು ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. ನಗರದ ಖಾಸಗಿ ಹೊಟೇಲ್ ನಲ್ಲಿ ಏ. 25 ರ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನನ್ನ ಸ್ಥಾನವನ್ನು ಮೊಯ್ದೀನ್ ಬಾವ ಅವರಿಗೆ ಕೇವಲ ಒಂದು ಅವಧಿಗಾಗಿ ಬಿಟ್ಟುಕೊಟ್ಟಿದೆ. ಈ ಸಂದರ್ಭದಲ್ಲಿ ಎ.ಕೆ ಆಂಟ್ಯನಿ, ಜನಾರ್ಧನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಸೇರಿದಂತೆ ಆನೇಕ ಕಾಂಗ್ರೆಸ್ ಮುಖಂಡರು, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಟಿಕೆಟ್ ನೀಡುವಂತೆ ಆಶ್ವಾಸನೆ ನೀಡಿದ್ದರು. ಆದರೆ ಈ ಭರವಸೆ ಈಡೇರಲಿಲ್ಲ ಮತ್ತು ಈ ಬಾರಿಯೂ ವಿಧಾನ ಸಭಾ ಚುನಾವಣೆಗೆ ಆಕಾಂಕ್ಷಿಯಾಗಿದ್ದ ನನಗೆ ಟಿಕೆಟ್ ನೀಡದೆ ಮೋಸ ಮಾಡಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಮೇಲೆ ನನಗೆ ಬೇಸರವಿಲ್ಲ. ಆದರೆ ಪಕ್ಷದಲ್ಲಿರುವ ತುಂಡು ನಾಯಕರಿಂದ ನನಗೆ ಅಘಾತವಾಗಿದೆ. ನಾನು ನೇತ್ರಾವತಿ ನದಿ ತಿರುವು ಯೋಜನೆಯಲ್ಲಿ ಜಿಲ್ಲೆಯ ಜನರ ಪರವಾಗಿ ಹೋರಾಡಿದ್ದೇನೆ, ಏನೇ ಆದರೂ ಈ ಹೋರಾಟದಿಂದ ನಾನು ಹಿಂದೆ ಸರಿಯುವುದಿಲ್ಲ. ನೇತ್ರಾವತಿ ಹೋರಾಟದಿಂದ ಟಿಕೆಟ್ ಕೈ ತಪ್ಪಿದೆ ಅನ್ನುವ ವಿಚಾರ ಸುಳ್ಳು. ನನ್ನ ವಿರುದ್ದ ವ್ಯವಸ್ಥಿತ ಅಪಪ್ರಚಾರ ನಡೆಸಲಾಗುತ್ತಿದೆ. ಆದರೂ ಪಕ್ಷ ತೊರೆಯಲು ನನ್ನ ಮನಸ್ಸು ಒಪ್ಪುವುದಿಲ್ಲ ಎಂದು ಹೇಳಿದರು.
ಉತ್ತರ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕಡೆ ಪ್ರಚಾರಕ್ಕೆ ಹೋಗುತ್ತಿದ್ದು, ಪಕ್ಷದ ಉಸ್ತುವಾರಿ ವೇಣುಗೋಪಾಲ್ ಮತ್ತು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್ ಅವರಿಂದ ನ್ಯಾಯ ಸಿಗುವ ಭರವಸೆ ಇದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಪತ್ರಿಕಾಗೋಷ್ಟಿಯಲ್ಲಿ, ಪಾಲಿಕೆ ಸದಸ್ಯೆ ನಾಗವೇಣಿ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಉತ್ತಮ್ ಆಳ್ವಾ, ಮುಂತಾದವರು ಉಪಸ್ಥಿತರಿದ್ದರು.