ಮಂಗಳೂರು, ಆ. 13 (DaijiworldNews/MB) : ಲಾಕ್ಡೌನ್ ಸಂದರ್ಭದಲ್ಲಿ ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ನಿಷೇಧ ಹೇರಿದ್ದ ಮಂಗಳೂರು ಮಹಾನಗರ ಪಾಲಿಕೆ ಇದೀಗ ಆದೇಶವನ್ನು ಹಿಂಪಡೆದಿದ್ದು ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ಮರು ಆರಂಭವಾಗಲಿದೆ.

ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ಸ್ಥಗಿತಗೊಳಿಸಿದ ಬಳಿಕ ವ್ಯಾಪಾರಸ್ಥರರಿಗೆ ಮಾರಾಟಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಾರುಕಟ್ಟಯನ್ನು ಬೈಕಾಂಪಡಿಯಲ್ಲಿನ ಎಪಿಎಂಸಿಗೆ ಸ್ಥಳಾಂತರಿಸಲಾಗಿತ್ತು.
ಆದರೆ ಪ್ರಸ್ತುತ 1976 ರ ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯ ನಿಬಂಧನೆಗೆ ಅನುಗುಣವಾಗಿ ಮಂಗಳೂರು ಮಹಾನಗರ ಪಾಲಿಕೆಯು ಈ ಹಿಂದಿನ ಆದೇಶವನ್ನು ಹಿಂಪಡೆದಿದೆ.
ಏಪ್ರಿಲ್ 7 ರಂದು ಮಂಗಳೂರು ಮಹಾನಗರ ಪಾಲಿಕೆಯು, ತರಕಾರಿ ಹಾಗೂ ಮೀನು ಮಾರಾಟ ಮಾಡುವ ಸೆಂಟ್ರಲ್ ಮಾರುಕಟ್ಟೆಯ ಕಟ್ಟಡಗಳು ಹಳೆಯ ಕಟ್ಟಡಗಳಾಗಿವೆ. ಈ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಇದರ ದುರಸ್ತಿ ಸಾಧ್ಯವಿಲ್ಲ. ಆದ್ದರಿಂದ ಈ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡವನ್ನು ನಿರ್ಮಿಸಲು ಪಾಲಿಕೆ ಕ್ರಮ ಕೈಗೊಂಡಿದೆ ಎಂದು ಪ್ರಕಟನೆಯಲ್ಲಿ ತಿಳಿಸಿತ್ತು.
ಹಾಗೆಯೇ ಈ ಮಾರುಕಟ್ಟೆಯಲ್ಲಿ ಜನರು ಒಟ್ಟುಗೂಡುವುದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಜನರ ಹಿತದೃಷ್ಟಿಯಿಂದ ಈ ಮಾರುಕಟ್ಟೆಯಲ್ಲಿ ವ್ಯಾಪಾರ ಸ್ಥಗಿತಗೊಳಿಸುವುದು ಅತ್ಯಗತ್ಯ. ಈ ಕಟ್ಟಡದಲ್ಲಿ ಯಾವುದೇ ವ್ಯಾಪಾರ ವ್ಯವಹಾರ ನಡೆಸಲು ಅವಕಾಶವಿಲ್ಲ ಎಂದು ತಿಳಿಸಿತ್ತು.
ಇನ್ನು ಈ ಆದೇಶದ ವಿರುದ್ದ 37 ಮಂದಿ ವ್ಯಾಪಾರಸ್ಥರು ಕಾನೂನಿನ ಮೊರೆ ಹೋಗಿದ್ದರು. ವ್ಯಾಪಾರಸ್ಥರು ಪಾಲಿಕೆಯ ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಅಂಗಡಿ ತೆರವುಗೊಳಿಸಲು ಮನಪಾ ನ್ಯಾಯಾಲಕ್ಕೆ ಸಲ್ಲಿಸಿದ್ದ ಅರ್ಜಿಗಳಿಗೂ ಕೂಡಾ ನ್ಯಾಯಾಲಯ ಒಪ್ಪಿಗೆ ನೀಡಿರಲಿಲ್ಲ. ನ್ಯಾಯಾಲಯವು ಕಾನೂನು ಪಾಲನೆ ಮಾಡುವಂತೆ ಮನಪಾಗೆ ಆದೇಶಿಸಿತ್ತು.
ಇದೀಗ ಮಹಾನಗರ ಪಾಲಿಕೆ ಆದೇಶವನ್ನು ವಾಪಾಸ್ ಪಡೆದಿದ್ದು ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಈ ಹಳೆಯ ಕಟ್ಟಡದಲ್ಲೇ ವ್ಯಾಪಾರ ನಡೆಯಲಿದೆಯೋ ಅಥವಾ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆಯೋ ಎಂದು ಇನ್ನಷ್ಟೇ ತಿಳಿದು ಬರಬೇಕಾಗಿದೆ.