ಏ, 26 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗುತ್ತಿದ್ದಂತೆ, ಪ್ರಧಾನಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಬಿಜೆಪಿ ಅಭ್ಯರ್ಥಿಗಳಿಗೆ ಸಲಹೆ, ಸೂಚನೆ ನೀಡಿ ಅಭ್ಯರ್ಥಿಗಳನ್ನು ಹುರಿದುಂಬಿಸುವ ಕೆಲಸ ಮಾಡಿದ್ದಾರೆ. ಗುರುವಾರ ಬೆಳಗ್ಗೆ 9 ಗಂಟೆಗೆ ಪಕ್ಷದ ಅಭ್ಯರ್ಥಿಗಳು, ಪದಾಧಿಕಾರಿಗಳು, ಸಂಸದರು, ಶಾಸಕರೊಂದಿಗೆ ಮೋದಿ ಆ್ಯಪ್ನಲ್ಲಿ ಸಂವಾದ ನಡೆಸಿ ಅಭಿವೃದ್ಧಿಯೇ ನಮ್ಮ ಸರ್ಕಾರದ ಏಕೈಕ ಅಜೆಂಡಾ ಎಂದು ಹೇಳಿದ್ದಾರೆ.
ಪ್ರಾರಂಭದಲ್ಲಿ ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ಎಲ್ಲರಿಗೂ ನಮಸ್ಕಾರ..ನಾನು ಕನ್ನಡ ಕಲಿತಿಲ್ಲ ಹಾಗಾಗಿ ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಸಂವಾದವನ್ನು ಮುಂದುವರೆಸುತ್ತೇನೆ ಆದರೆ ನನ್ನನ್ನೂ ಕನ್ನಡಿಗ ಎಂದು ಪರಿಗಣಿಸಿ ನಮ್ಮನ್ನು ಬೆಂಬಲಿಸಿ ಎಂದು ವಿನಂತಿಸಿಕೊಂಡರು.
ಕರ್ನಾಟಕದಲ್ಲಿ ಕಮಲ ಅರಳಲಿದೆ. ಇದಕ್ಕಾಗಿ 15 ದಿನ ವಿಶ್ರಾಂತಿ ಪಡೆಯದೆ ಕಾರ್ಯಕರ್ತರು ಹೋರಾಟ ಮಾಡಬೇಕಾಗಿದ್ದು, ಗೆಲುವು ನಮ್ಮದಾಗಲಿದೆ ಎಂದರು. ಯುಪಿಎ ಸರ್ಕಾರದ ವೈಫಲ್ಯ ತಿಳಿಸಿದ ಅವರು ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಮತಗಳನ್ನು ಕೇಳಬೇಕು ಎಂದರು. ಅಭಿವೃದ್ಧಿ ರಾಜಕೀಯ ಬಿಜೆಪಿಯ ಮೂಲ ಮಂತ್ರವಾಗಿದ್ದು ಚುನಾವಣೆಯನ್ನು ಕಾರ್ಯಕರ್ತರು ಆತ್ಮಸ್ಥೈರ್ಯದಿಂದ ಎದುರಿಸಬೇಕಾಗಿದೆ. ಇದಕ್ಕಾಗಿ ಕರ್ನಾಟಕಕ್ಕೆ ಬಂದು ನಾನು ಕೂಡಾ ಮತಯಾಚಿಸಲಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಕಾರ್ಯಕರ್ತರ ಶಕ್ತಿ ಶಕ್ತಿ ದುಪ್ಪಟ್ಟು ಮಾಡುವಂತೆ ಸೂಚಿಸಿ ಪುರುಷ ಕಾರ್ಯಕರ್ತರ ಬಲಾಬಲಕ್ಕೆ ಮಹಿಳಾ ಕಾರ್ಯಕರ್ತರು ಇರಬೇಕು. ಶಾಸಕ ಸ್ಥಾನದ ಗೆಲುವಲ್ಲ ಮಾತ್ರವಲ್ಲದೆ ಪ್ರತೀ ಬೂತ್ನ ಗೆಲುವು ನಮ್ಮದಾಗಬೇಕು' ಎಂದು ಕರೆ ನೀಡಿದರು. ಜಾತಿ, ಧರ್ಮ, ಸಮುದಾಯ ವಿಭಜನೆ ಬಿಜೆಪಿ ಗುರಿಯಲ್ಲ. ಅಭಿವೃದ್ಧಿ ಅಂಜೆಡಾ ಮೇಲೆಯೇ ನಾವು ಚುನಾವಣೆ ಸ್ಪರ್ಧಿಸಬೇಕು.
ಗಂಧದ ನಾಡು ಎಂದು ಹೆಸರುವಾಸಿಯಾಗಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುತ್ತಿರುವುದರಿಂದ, ಗಂಧದ ಮಾರುಕಟ್ಟೆ ಆಸ್ಟ್ರೇಲಿಯಾದಲ್ಲಿ ದೊಡ್ಡದಾಗಿದೆ. ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ಗಂಧದ ಮರ ಬೆಳೆಯಲು ಅನುಕೂಲ ಮಾಡಿಕೊಡುವುದಾಗಿ ಮೋದಿ ಹೇಳಿದರು.