ಮಂಗಳೂರು, ಆ. 13 (DaijiworldNews/MB) : ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವೃದೆಯೊಬ್ಬರಿಗೆ ಪ್ಲಾಸ್ಮಾ ದಾನ ಮಾಡಲು ಇಬ್ಬರು ಯುವಕರು ಬೆಂಗಳೂರಿಗೆ ತೆರಳಿ ಮಾನವೀಯತೆ ಮೆರೆದಿದ್ದು ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹೈದರ್ ಅಲಿ ಹಾಗೂ ಝೀಶಾನ್ ಅಲಿ
ಭಟ್ಕಳ ಮೂಲದ 85 ವರ್ಷದ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬಿ + ಗುಂಪಿಗೆ ಸೇರಿದ ಪ್ಲಾಸ್ಮಾ ಅಗತ್ಯವಿತ್ತು. ಈ ಬಗ್ಗೆ ವೆಲ್ನೆಸ್ ಹೆಲ್ಪ್ಲೈನ್ ಸಂಸ್ಥೆಗೆ ಮಾಹಿತಿ ನೀಡಲಾಗಿತ್ತು.
ವೆಲ್ನೆಸ್ ಹೆಲ್ಪ್ಲೈನ್ನ ಸಂಯೋಜಕರಾದ ಝಾಕೀರ್ ಪರ್ವೇಜ್ ಪ್ಲಾಸ್ಮಾಕ್ಕಾಗಿ ಅನೇಕರನ್ನು ಸಂಪರ್ಕಿಸಿದರು. ಈ ಸಂದರ್ಭದಲ್ಲಿ ಪ್ಲಾಸ್ಮಾ ದಾನಕ್ಕೆ ಯುವ ವಕೀಲ ಝೀಶಾನ್ ಅಲಿ ಹಾಗೂ ಗಲ್ಫ್ನ ಉದ್ಯಮಿ ಹೈದರ್ ಅಲಿ ಅವರು ಮುಂದಾಗಿದ್ದಾರೆ. ಇಬ್ಬರಿಗೂ ಕೂಡಾ ಈ ಮೊದಲು ಕೊರೊನಾ ಸೋಂಕು ತಗುಲಿದ್ದು ಈ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
ಮಂಗಳೂರು, ಉಡುಪಿ ಮುಂತಾದ ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ದಾನ ಮಾಡಲು ಯಾವುದೇ ಸೌಲಭ್ಯವಿಲ್ಲದ ಕಾರಣ, ಅವರು ಭಾನುವಾರ ರಾತ್ರಿ ಬೆಂಗಳೂರಿಗೆ ತೆರಳಿ ಸೋಮವಾರ ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡಿ ಮರಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ಲಾಸ್ಮಾ ದಾನಿ ಸುರತ್ಕಲ್ನ ಝೀಶಾನ್ ಅವರು, ಸೌದಿ ಅರೇಬಿಯಾದಲ್ಲಿದ್ದಾಗ ನನಗೆ ಕೊರೊನಾ ಸೋಂಕು ತಗುಲಿತ್ತು. ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. 14 ದಿನಗಳಿಗೊಮ್ಮೆ ಪ್ಲಾಸ್ಮಾ ದಾನ ಮಾಡಬಹುದಾಗಿದೆ. ಆಸ್ಪತ್ರೆಗೆ ಪ್ರಯಾಣ ಮಾಡಿದ ವೆಚ್ಚ ಸೇರಿ 8,750 ರೂಗಳನ್ನು ವೆಚ್ಚ ಮಾಡಿದ್ದೇನೆ. ರೋಗಿಯ ಜೀವ ಉಳಿಸಲು ಸಹಾಯ ಮಾಡಿದ್ದೇನೆ ಎಂದು ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಬಜ್ಪೆಯ ಹೈದರ್ ಅಲಿ ಮಾತನಾಡಿ, ಹಿದಾಯ ಫೌಂಡೇಶನ್ನ ಮುಖ್ಯಸ್ಥ ಖಾಸಿಮ್ ಅಹ್ಮದ್ ಅವರು ರೋಗಿಗೆ ಪ್ಲಾಸ್ಮಾ ಅಗತ್ಯವಿದೆ ಎಂದು ಕರೆ ಮಾಡಿ ತಿಳಿಸಿದರು. ಹಾಗಾಗಿ ಪ್ಲಾಸ್ಮಾ ದಾನಕ್ಕಾಗಿ ಬೆಂಗಳೂರಿಗೆ ಪ್ರಯಾಣ ಮಾಡಿದೆ. ನಗರದಲ್ಲೂ ಪ್ಲಾಸ್ಮಾ ಸಂಗ್ರಹ ಕೇಂದ್ರ ಆರಂಭವಾದರೆ ಹೆಚ್ಚಿನ ಜನರು ಪ್ಲಾಸ್ಮಾ ದಾನ ಮಾಡಲು ಮುಂದೆ ಬರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಶಾಸಕ ಡಿ ವೇದವ್ಯಾಸ್ ಕಾಮತ್ ಅವರು, ಮಂಗಳೂರಿನಲ್ಲೂ ಪ್ಲಾಸ್ಮಾ ಕೇಂದ್ರ ಸ್ಥಾಪಿಸುವ ಕುರಿತು ಸಚಿವರೊಂದಿಗೆ ಚರ್ಚಿಸಿ, ಈ ಕುರಿತು ಪ್ರಸ್ತಾವನೆ ಸಲ್ಲಿಸಿ ಶೀಘ್ರವೇ ಪ್ಲಾಸ್ಮಾ ಥೆರಪಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಬುಧವಾರ ತಿಳಿಸಿದ್ದಾರೆ.