ಮೈಸೂರು, ಏ 26: ರಾಜ್ಯಕ್ಕೆ ಬಂದು ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತನಾಡುವುದರಿಂದ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪರ ಟ್ರೆಂಡ್ ಇರುವಾಗ ಪ್ರಧಾನಮಂತ್ರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬರುವುದು ವೇಸ್ಟ್. ಇವರಿಂದ ಯಾವುದೇ ರೀತಿಯ ಬದಲಾವಣೆ ಆಗುವುದಿಲ್ಲ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಬಿಜೆಪಿ ಪರವಾಗಿ ಪ್ರಚಾರ ಮಾಡಲಿದ್ದಾರೆ. ಅವರ ಪ್ರಚಾರದಿಂದ ನಮ್ಮ ಪಕ್ಷಕ್ಕೆ ಯಾವುದೇ ರೀತಿಯ ಹಿನ್ನಡೆಯಾಗಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೆ ರಾಜ್ಯದಲ್ಲಿ ಒಂದು ರಾಜಕೀಯ ಟ್ರೆಂಡ್ ಶುರುವಾಗಿದ್ದು, ಅದು ಕಾಂಗ್ರೆಸ್ ಪರವಾಗಿದೆ. ಬಿಜೆಪಿಯಂತೆ ನಮ್ಮ ಪಕ್ಷದಿಂದ ಕೂಡ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಏಳು ದಿನ ಪ್ರಚಾರ ಮಾಡುತ್ತಿದ್ದಾರೆ. ನಾನೂ ಪ್ರಚಾರ ಮಾಡುತ್ತೇನೆ. ಪಕ್ಷದ ಅಧ್ಯಕ್ಷರು, ಖರ್ಗೆ ಎಲ್ಲರೂ ಪ್ರಚಾರ ಮಾಡುತ್ತೇವೆ. ನಾವೆಲ್ಲರೂ ಸೇರಿ ಮೋದಿ, ಅಮಿತ್ ಶಾ ಅವರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೂ ಪ್ರಚಾರ ಮಾಡಿದ್ದೇನೆ. ಮತದಾನ ಮಾಡಲು ಎರಡು ದಿನ ಬಾಕಿ ಇರುವಂತೆ ಮತ್ತೆ ಪ್ರಚಾರಕ್ಕೆ ಬರುತ್ತೇನೆ. ಬಾದಾಮಿಯಲ್ಲಿ ಒಂದು ದಿನ ಪ್ರಚಾರಕ್ಕೆ ತೆರಳಿ ಒಂದೆರಡು ಕಡೆಗಳಲ್ಲಿ ಸಭೆ ಮಾಡುತ್ತೇನೆ. ಅದರ ಹೊರತಾಗಿ ಹೆಚ್ಚು ಪ್ರಚಾರಕ್ಕೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.