ಕಾಸರಗೋಡು, ಆ. 13 (DaijiworldNews/SM): ಐಸ್ ಕ್ರೀಮ್ ನಲ್ಲಿ ವಿಷ ಬೆರೆಸಿ ನೀಡಿ ಹದಿನಾರು ವರ್ಷದ ಸಹೋದರಿಯನ್ನು ಸಹೋದರನೇ ಕೊಲೆಗೈ ದ ಘಟನೆ ಜಿಲ್ಲೆಯ ವೆಳ್ಳರಿಕುಂಡು ಠಾಣಾ ವ್ಯಾಪ್ತಿಯ ಬಳಾಲ್ ಎಂಬಲ್ಲಿ ಬೆಳಕಿಗೆ ಬಂದಿದೆ. ಸಹೋದರಿ ಮಾತ್ರವಲ್ಲದೆ ತಂದೆ ಮತ್ತು ತಾಯಿಯನ್ನು ಈತ ಕೊಲೆಗೆ ಯತ್ನಿಸಿದ್ದು, ಈ ಪೈಕಿ ತಂದೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಬಳಾಲ್ ಅರಿಂಗಲ್ ನ ಬೆನ್ನಿ-ಬೆನ್ಸಿ ದಂಪತಿ ಪುತ್ರಿ ಆನ್ ಮೇರಿ(16) ಕೊಲೆಗೀಡಾದವಳು. ಕೃತ್ಯಕ್ಕೆ ಸಂಬಂಧಪಟ್ಟಂತೆ ಆರೋಪಿ ಸಹೋದರ ಅಲ್ಬಿನ್ ಬೆನ್ನಿ(22)ನನ್ನು ಪೊಲೀಸರು ಬಂಧಿಸಿದ್ದಾರೆ. ತಂದೆ ಬೆನ್ನಿ ಜಿಲ್ಲಾಸ್ಪತ್ರೆ ಹಾಗೂ ತಾಯಿ ಬೆಸ್ಸಿ ಕಣ್ಣೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎರಡು ವಾರಗಳ ಹಿಂದೆ ಘಟನೆ ನಡೆದಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮೇರಿ ಆಗಸ್ಟ್ ಐದರಂದು ಮೃತಪಟ್ಟಿದ್ದಳು. ಗಂಭೀರ ಸ್ಥಿತಿಯಲ್ಲಿ ಮೇರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸ್ಥಿತಿ ಗಂಭೀರವಾದುದುದರಿಂದ ಕೋಜಿಕ್ಕೋಡ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಆಗಸ್ಟ್ ಆರರಂದು ಮೃತಪಟ್ಟಿದ್ದಾಳೆ.
ಘಟನೆಯ ವಿವರ:
ಮನೆಯಲ್ಲೇ ತಯಾರಿಸಿದ ಐಸ್ ಕ್ರೀಮ್ ನ್ನು ಸಹೋದರಿ ಹಾಗೂ ತಂದೆ-ತಾಯಿ ಸೇವಿಸಿದ್ದರು. ಐಸ್ ಕ್ರೀಮ್ ಸೇವಿಸಿದ ಬಳಿಕ ವಾಂತಿ ಬೇಧಿ ಸೇರಿದಂತೆ ಅಸ್ವಸ್ಥತೆ ಉಂಟಾಗಿತ್ತು. ಹಳಸಿದ ಆಹಾರ ಸೇವನೆಯಿಂದ ಅಸ್ವಸ್ಥತೆ ಉಂಟಾಗಿದ್ದಾಗಿ ನಂಬಿ ಮೂವರು ಮನೆ ಮದ್ದನ್ನು ಸೇವಿಸಿದ್ದರು. ಎರಡು ದಿನಗಳ ಬಳಿಕ ಆನ್ ಮೇರಿ ಅಸ್ವಸ್ಥಗೊಂಡಿದ್ದು, ಇದರಿಂದ ಚೆರುಪ್ಪುಯದ ಆಸ್ಪತ್ರೆಗೆ ದಾಖಲಿಸಲಾಯಿತು. ಈ ನಡುವೆ ಆನ್ ಮೇರಿಗೆ ಹಳದಿ ಕಾಮಾಲೆ ಕಂಡುಬಂದಿತ್ತು. ಸ್ಥಿತಿ ಗಂಭೀರಗೊಂಡು ಆಗಸ್ಟ್ ಐದರಂದು ಮೃತಪಟ್ಟಿದ್ದಳು. ಇದಲ್ಲದೆ ಬೆನ್ನಿ ರವರ ಸ್ಥಿತಿಯೂ ಗಂಭೀರವಾಗಿದ್ದು, ಪಯ್ಯನ್ನೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಥಿತಿ ಗಂಭೀರವಾದುದರಿಂದ ಕೋಜಿಕ್ಕೋಡ್ ನ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲಾಯಿತು.
ಹಳಸಿದ ಆಹಾರ ಸೇವನೆಯಿಂದ ಅಸ್ವಸ್ಥತೆ ಉಂಟಾಗಿದ್ದಾಗಿ ಆರಂಭದಲ್ಲಿ ನಂಬಲಾಗಿತ್ತು. ಆದರೆ ಅನ್ನಾ ಮೇರಿ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟ ಹಿನ್ನಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆಯಿಂದ ಆನ್ ಮೇರಿ ವಿಷ ಸೇವನೆಯಿಂದ ಮೃತಪಟ್ಟಿರುವುದಾಗಿ ಖಚಿತಗೊಂಡಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆಲ್ಬಿನ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಕುಟುಂಬದ ನಾಲ್ವರ ಪೈಕಿ ಮೂವರ ದೇಹದೊಳಗೆ ವಿಷ ಪದಾರ್ಥ ಪತ್ತೆಯಾಗಿದ್ದರೂ ಆಲ್ಬಿನ್ ನಲ್ಲಿ ಪತ್ತೆಯಾಗಿರಲಿಲ್ಲ. ಇದರಿಂದ ಆಲ್ಬಿನ್ ನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ.
ಐಸ್ ಕ್ರೀಮ್ ನಲ್ಲಿ ಇಲಿ ವಿಷ ಬೆರೆಸಿ ನೀಡಿದ್ದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ. ಈತನ ಪ್ರೇಮ ಹಾಗೂ ಅಕ್ರಮ ವ್ಯವಹಾರಕ್ಕೆ ಮನೆಯವರು ಅಡ್ಡಿ ಬರುತ್ತಿದ್ದಾರೆ ಎಂಬ ಕಾರಣಕ್ಕೆ ಈತ ಮನೆಯವರನ್ನು ಕೊಲೆಗೈಯ್ಯಲು ತೀರ್ಮಾನಿಸಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ. ಅನ್ಯ ಜಾತಿಯ ಯುವತಿಯನ್ನು ಈತ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಮನೆಯವರು ಅಡ್ಡಿಪಡಿಸಿದ್ದು, ಇದರಿಂದ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ.