ಮಂಗಳೂರು, ಏ 26: ಕಾಂಗ್ರೆಸ್ ಪಕ್ಷ ನನಗೆ ಎಂದಿಗೂ ದ್ರೋಹ ಬಗೆದಿಲ್ಲ, ಹಾಗಾಗಿ ಪಕ್ಷ ತೊರೆಯುವ ಯಾವುದೇ ಯೋಚನೆ ಇಲ್ಲ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸ್ಪಷ್ಟಪಡಿಸಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಏ, 26 ರ ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಯುವ ಕಾಂಗ್ರೆಸ್ ನನ್ನನು ಪೋಷಿಸಿ ಬೆಳೆಸಿದೆ. ಪಕ್ಷ ನನಗೆ ಅನ್ಯಾಯ ಮಾಡಿಲ್ಲ. ಮುಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ತಾನು ಕಳೆದ ಮೂರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ. ಪಕ್ಷವನ್ನು ಬಲಪಡಿಸಿದ್ದರಿಂದ ಸಹಜವಾಗಿ ಇಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಟಿಕೆಟ್ ಕೈ ತಪ್ಪಿದಾಗ ನೋವಾಗುವುದು ಮಾನವ ಸಹಜ ಗುಣ. ಪ್ರಸ್ತುತ ಅಭಯಚಂದ್ರ ಜೈನ್ ಅವರ ಪರ ಪ್ರಚಾರ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದರು.
ಟಿಕೆಟ್ ಪಟ್ಟಿ ಬಿಡುಗಡೆ ಬಳಿಕ ನಾನು ದಿಲ್ಲಿಗೆ ತೆರಳಿದ್ದಾಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದು, ಅವರು ನನಗೆ ಯುವ ಕಾಂಗ್ರೆಸ್ ನ್ನು ಬಲಪಡಿಸುವಲ್ಲಿ ಸಕ್ರಿಯವಾಗುವಂತೆ ಸೂಚಿನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಯುವ ಕಾಂಗ್ರೆಸ್ ನಿರ್ಧರಿಸಿದೆ ಎಂದು ಅವರು ಹೇಳಿದರು.
ಯುವ ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆ ಬಗ್ಗೆ ಪ್ರಶ್ನಿಸಿದಾಗ , ಇಂದು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ನಡೆದಿದ್ದು, ಸ್ವೀಕರಿಸಿದ ರಾಜೀನಾಮೆಗಳನ್ನು ತಿರಸ್ಕರಿಸಲಾಗಿದೆ. ನಮ್ಮ ಮುಂದಿನ ಗುರಿ ದ.ಕ. ಜಿಲ್ಲೆಯ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವು ಹಾಗೂ ರಾಹುಲ್ ಗಾಂಧಿ ದೇಶದ ಪ್ರಧಾನಿ ಹುದ್ದೆ ಅಲಂಕರಿಸುವಂತೆ ಮಾಡುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿ ಯು.ಬಿ.ವೆಂಕಟೇಶ್, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.