ಪುತ್ತೂರು, ಸೆ22: ಪುತ್ತೂರಿನಲ್ಲಿ ಹಿಂದೂ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಸಂಚಾಲಕ ಜಗದೀಶ್ ಕಾರಂತ್, ಪ್ರಚೋದನಕಾರಿ ಭಾಷಣ ಮಾಡಿದ್ದು ಮಾತ್ರವಲ್ಲದೆ, ಸುರತ್ಕಲ್ ಮಾದರಿಯ ಕೋಮು ಗಲಭೆ ನಡೆಸುವುದಾಗಿ ಮತ್ತು ಪೊಲೀಸ್ ಅಧಿಕಾರಿಯನ್ನು ತಲೆ ಬೋಳಿಸಿ, ಬೆತ್ತಲೆ ಮಾಡಿ ಕತ್ತೆ ಮೇಲೆ ಮೆರವಣಿಗೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಕಾರಂತರ ಪ್ರಚೋದನಕಾರಿ ಹೇಳಿಕೆಯ ವಿರುದ್ಧ, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಕೋಮು ಪ್ರಚೋದನಾಕಾರಿಯಾಗಿ ಪೊಲೀಸರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿ, ಬೆದರಿಕೆ ಒಡ್ಡಿದ ಆರೋಪದಲ್ಲಿ ಜಗದೀಶ್ ಕಾರಂತ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಹಿಂಜಾವೇ ಕ್ಷೇತ್ರೀಯ ಪ್ರಧಾನ ಕಾರ್ಯದರ್ಶಿ ಕಾರಂತ್, ಗ್ರಾಮಾಂತರ ಠಾಣಾ ಎಸ್ಸೈ ಅಬ್ದುಲ್ ಖಾದರ್, ಎಎಸೈ ರುಕ್ಮಾ ಹಾಗೂ ಚಂದ್ರ ಅವರನ್ನು ಹೀಯಾಳಿಸಿ ಮಾತನಾಡಿದ್ದರು. ಅಲ್ಲದೆ ಪೊಲೀಸರು ಹಿಂದೂಗಳನ್ನು ದಮನಿಸುವ ಕೃತ್ಯವನ್ನು ಮಾಡುತ್ತಿದ್ದಾರೆ. ಪೊಲೀಸರು ಇದೇ ರೀತಿ ಮುಂದುವರಿದಲ್ಲಿ ಪುತ್ತೂರನ್ನು ಹಳೆಯ ಸುರತ್ಕಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು. ಪ್ರಕರಣ ನಡೆದು 5 ದಿನಗಳು ಕಳೆದರೂ ಯಾವುದೇ ಕೇಸು ದಾಖಲಾಗಿರಲಿಲ್ಲ. ಇದೀಗ ಗೃಹ ಸಚಿವರ ಸೂಚನೆ ಬಳಿಕ ಸ್ವಯಂಪ್ರೇರಿತ ದೂರು ದಾಖಲಾಗಿದೆ.