ಮಂಗಳೂರು, ಆ 14 (DaijiworldNews/PY): ಆ.16ರಿಂದ ಪಿಲಿಕುಳ ಮೃಗಾಲಯ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದ್ದು, ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ತಿಳಿಸಿದ್ದಾರೆ.

ಪ್ರತೀ ಸೋಮವಾರ ಮೃಗಾಲಯದ ನಿರ್ವಹಣೆ ಕಾರ್ಯ ನಡೆಯಬೇಕಾಗಿರುವುದರಿಂದ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿಲ್ಲ. ಇನ್ನು ಮೃಗಾಲಯಕ್ಕೆ ಬರುವ ಸಂದರ್ಭ ಕೊರೊನಾ ಬಗ್ಗೆ ಜಿಲ್ಲಾಡಳಿತ ನೀಡುತ್ತಿರುವ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಮೃಗಾಲಯಕ್ಕೆ ಬರುವ ವೇಳೆ ಸಂದರ್ಶಕರು ಮಾಸ್ಕ್ ಅನ್ನು ಕಡ್ಡಾಯವಾಗಿ ಸರಿಯಾಗಿ ಧರಿಸಬೇಕು. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆ ಮಾಡಲಾಗುವುದು. ಅಲ್ಲದೇ, ಕೈಗಳನ್ನು ಸ್ಯಾನಿಟೈಸ್ ಮಾಡಲಾಗುವುದು. ಮೃಗಾಲಯದ ಒಳಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಮೃಗಾಲಯದಲ್ಲಿ 76 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
ಪ್ರವೇಶ ದ್ವಾರದ ಬೋಕ್ಸ್ ಆಫೀಸ್ನಲ್ಲೇ ಟಿಕೇಟ್ ಅನ್ನು ನೀಡಲಾಗುವುದು. ಮೃಗಾಲಯದ ಎದುರುಗಡೆ ನಿಗದಿಪಡಿಸಿದ ಪ್ರದೇಶದಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ಅನುಮತಿ ನೀಡಲಾಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್.ಜೆ.ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊರೊನಾ ಸೋಂಕು- ಮಳೆಗಾಲದ ಹಿನ್ನೆಲೆ ಪಿಲಿಕುಳ ನಿಸರ್ಗಧಾಮ ಬಂದ್ ಮಾಡಲಾಗಿತ್ತು. ಇದೀಗ ಜಿಲ್ಲಾಡಳಿತ ಕೊರೊನಾ ಬಗ್ಗೆ ನೀಡುತ್ತಿರುವ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಮೃಗಾಲಯ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.