ಮಂಗಳೂರು, ಏ 26: ಆಹಾರ ಸಚಿವ ಯು.ಟಿ.ಖಾದರ್ ಅವರನ್ನು ಖಾಸಗಿ ಕಾರ್ಯಕ್ರಮಕ್ಕೆ ಕರೆದು ಕೇಸರಿ ಶಾಲು ಹಾಕಿ ಸನ್ಮಾನಿಸಿದ್ದ ಯುವ ಕಾಂಗ್ರೆಸ್ ಮುಖಂಡನೊಬ್ಬನಿಗೆ ಜೀವ ಬೆದರಿಕೆ ಹಾಕಿ, ಸಾಮಾಜಿಕ ತಾಣಗಳಲ್ಲಿ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ಕಳೆದ ಮೂರು ವರ್ಷಗಳ ಹಿಂದೆ ನಗರದ ಮಡ್ಯಾರ್ ಎಂಬಲ್ಲಿ ನಡೆದಿದ್ದ ಕಬ್ಬಡ್ಡಿ ಪಂದ್ಯಾಟಕ್ಕೆ ಆಹಾರ ಸಚಿವ ಖಾದರ್ ಅವರನ್ನು ಯುವ ಕಾಂಗ್ರೆಸ್ ಮುಖಂಡ ಸಂಪತ್ ಮಡ್ಯಾರ್ ಎಂಬಾತ ಅತಿಥಿಯಾಗಿ ಆಹ್ವಾನಿಸಿದ್ದ. ಅಲ್ಲದೇ ಈ ಕಾರ್ಯಕ್ರಮದಲ್ಲಿ ಖಾದರ್ ಅವರಿಗೆ ಕೇಸರಿ ಶಾಲು ಹಾಕಿ ಸನ್ಮಾನಿಸಲಾಗಿತ್ತು. ಆದರೆ ಮೂರು ವರ್ಷದ ಬಳಿಕ ಇದೀಗ ಚುನಾವಣೆ ಹೊಸ್ತಿಲಲ್ಲಿ ಖಾದರ್ ಕೇಸರಿ ಶಾಲು ಧರಿಸಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ಫೋಟೋದಲ್ಲಿ ಯುವ ಕಾಂಗ್ರೆಸ್ ಮುಖಂಡ ಸಂಪತ್ ಮಡ್ಯಾರ್ ಕೂಡ ಇದ್ದು, ಇದು ಹಲವರ ಕೆಂಗಣ್ಣಿಗೆ ಕಾರಣವಾಗಿದೆ. ಅಲ್ಲದೇ ಈತನ ಭಾವಚಿತ್ರಕ್ಕೆ X ಮಾರ್ಕ್ ಹಾಕಿ ಎಚ್ಚರಿಕೆ ನೀಡಲಾಗಿದೆ. ಕೇಸರಿ ಶಾಲಿಗೆ ಇನ್ನೊಮ್ಮೆ ಅವಮಾನವಾದರೆ ನಿನ್ನ ಅಂತ್ಯದ ಆರಂಭವಾದೀತು ಎಂದು ಬರೆದು ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಲಾಗಿದೆ. ಈ ನಡುವೆ ಶೈಲು ಬಜಿಲಕೇರಿ ಎಂಬಾತ ಸಂಪತ್ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ನೀಡಿದ್ದಾನೆ. ಕೇಸರಿ ಶಾಲನ್ನು ಖಾದರ್ ಅವರಿಗೆ ತೊಡಿಸಿರುವುದನ್ನು ಖಂಡಿಸಿ ಗರಂ ಆಗಿದ್ದಾನೆ. ಅಲ್ಲದೇ ನಿನಗೆ ಬದುಕೋದಕ್ಕೆ ಆಸೆ ಇಲ್ವಾ..? ನಮ್ಮ ಹುಡುಗರು ನಿನಗೆ x ಮಾರ್ಕ್ ಹಾಕಿದ್ರೆ ಮುಗೀತು ಎಂದು ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಪತ್, ಶೈಲು ನನಗೆ ಪರಿಚಯಸ್ಥ. ಆತ ಯಾಕೆ ಹೀಗೆ ಮಾಡಿದನೆಂದು ಗೊತ್ತಿಲ್ಲ. ನಾನು ಇವನ ವಿರುದ್ಧ ದೂರು ನೀಡಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಈ ವಿಚಾರ ಕರಾವಳಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.