ಕಾಸರಗೋಡು, ಜು. 14 (DaijiworldNews/SM): ಸಹೋದರಿಯನ್ನು ವಿಷ ನೀಡಿ ಕೊಲೆಗೈದ ಆರೋಪಿ ಆಲ್ಬಿನ್ ನನ್ನು ಇಂದು ಸಂಜೆ ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕ್ರಿಯೆ ನಡೆಯಿತು. ಹೆಚ್ಚಿನ ತನಿಖೆಗಾಗಿ ಆರೋಪಿ ಆಲ್ಬಿನ್ ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ .

ಕಾಸರಗೋಡು ಬಳಾಲ್ ನ ಸಹೋದರಿಯ ಕೊಲೆಗೆ ಸಂಬಂಧಪಟ್ಟಂತೆ ಪೊಲೀಸ್ ತನಿಖೆಯಿಂದ ಬೆಚ್ಚಿ ಬೀಳುವ ಮಾಹಿತಿಗಳು ತನಿಖಾ ತಂಡಕ್ಕೆ ಲಭಿಸಿದೆ. ಕೇವಲ 22 ವರ್ಷದ ಆಲ್ಬಿನ್ ಎಂಬ ಯುವಕ ಸಹೋದರ ತನ್ನ 16 ವರ್ಷದ ಆನ್ ಮೇರಿ ಎಂಬ ಸಹೋದರಿಯನ್ನು ಈತ ವಿಷ ನೀಡಿ ಕೊಲೆಗೈದಿರುವುದು ಬೆಚ್ಚಿ ಬೀಳಿಸಿದೆ.
ಕುಟುಂಬದ ಎಲ್ಲರನ್ನು ಕೊಲೆಗೈಯ್ಯಲು ಆಲ್ಬಿನ್ ತಂತ್ರ ರೂಪಿಸಿದ್ದು, ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಎಂದು ಬಿಂಬಿಸಲು ಈತ ಪ್ರಯತ್ನ ನಡೆಸಿದ್ದನು ಮಾದಕ ವ್ಯಸನಿಯಾಗಿದ್ದ ಈತನ ಚಲನ ವಲನಗಳ ಬಗ್ಗೆ ಮನೆಯವರಿಗೆ ಸಂಶಯ ಬರದಿರುವುದೇ ಇಂತಹ ಪೈಶಾಚಿಕ ಕೃತ್ಯ ನಡೆಸುವಂತಾಗಿದೆ. ಕುಟುಂಬದ ಎಲ್ಲರನ್ನೂ ಕೊಲೆಗೈದು ನಾಲ್ಕೂವರೆ ಎಕರೆ ಆಸ್ತಿಯನ್ನು ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುವ ಉದ್ದೇಶ ಈತನದ್ದಾಗಿತ್ತು. ಪ್ರೇಯಸಿಯ ಜೊತೆ ವಾಸವಾಗಲು ಈ ಕೃತ್ಯ ನಡೆಸಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಈತನ ಕೆಲ ಅಕ್ರಮ ವ್ಯವಹಾರಗಳ ಬಗ್ಗೆ ಮನೆಯವರು ಬುದ್ದಿವಾದ ಹೇಳಿದ್ದರು. ಅತೀಯಾಗಿ ಮೊಬೈಲ್ ಬಳಸುತ್ತಿದ್ದು ಈ ಕುರಿತು ಅಲ್ಬಿನ್ ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ದ್ವೇಷ ಕೂಡಾ ಈತನಲ್ಲಿತ್ತು ಎಂದು ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅವನು ತನ್ನ ಸಹೋದರಿಯೊಂದಿಗೆ ಉತ್ತಮ ಸಂಬಂಧವನ್ನು ಸಹ ಹೊಂದಿರಲಿಲ್ಲ. ಅಲ್ಬಿನ್ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾನೆ. ಅವನಿಗೆ ಹಲವಾರು ಗೆಳತಿಯರು ಸಹ ಇದ್ದರು ಆಡಂಬರ ಜೀವನ ಈತನ ಉದ್ದೇಶವಾಗಿತ್ತು.