ಮಂಗಳೂರು, ಜು. 14 (DaijiworldNews/SM): ಕೊರೊನಾ ಮಿತಿಮೀರಿದ್ದ ವೇಳೆ ಕೇರಳ-ಕರ್ನಾಟಕ ಗಡಿಭಾಗದ ಹಲವು ಕಡೆಗಳಲ್ಲಿ ದ.ಕ. ಜಿಲ್ಲಾಡಳಿತ ಹಾಕಿದ್ದ ಮಣ್ಣು ಇದೀಗ ತೆರವುಗೊಳಿಸಲಾಗಿದೆ. ಆ ಮೂಲಕ ಕಳೆದ ಕೆಲವು ದಿನಗಳಿಂದ ಗಡಿ ಭಾಗದವರ ನಿರಂತರ ಹೋರಾಟಕ್ಕೆ ಗೆಲುವು ಸಿಕ್ಕಂತಾಗಿದೆ.




ಕರೋಪಾಡಿ ಗ್ರಾಮದಲ್ಲಿ ಹಾಕಲಾಗಿದ್ದ ಮಣ್ಣನ್ನು ಜಿಲ್ಲಾಡಳಿತದ ಸೂಚನೆ ಮೇರೆಗೆ ಕರೋಪಾಡಿ ಗ್ರಾಮ ಪಂಚಾಯತ್ ವತಿಯಿಂದ ತೆರವು ಮಾಡಿ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಇನ್ನುಳಿದಂತೆ ಪ್ರಮುಖ ಗಡಿ ಭಾಗಗಳ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ದ.ಕ. ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ.
ಪ್ರಾರಂಭದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಕೇರಳ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡುವಂತೆ ಆಗಿನ ಜಿಲ್ಲಾಧಿಕಾರಿ ಸಿಂದೂ ರೂಪೇಶ್ ಅವರು ಆದೇಶ ನೀಡಿದ್ದರು. ಅದರಂತೆ ಕರೋಪಾಡಿ ಗ್ರಾಮದ ಪೆರೋಡಿ ಕ್ರಾಸ್, ಮುಗುಳಿ, ಬೇತಾ, ಕೋಡ್ಲಾ, ಸೇರಿದಂತೆ ಆರು ಕಡೆಗಳಲ್ಲಿ ರಸ್ತೆಯನ್ನು ಮಣ್ಣು ಹಾಕಿ ಮುಚ್ಚಲಾಗಿತ್ತು. ಇನ್ನೂ ಕೆಲವೆಡೆ ಬ್ಯಾರಿಕೇಡ್ ಅಳವಡಿಸಿ, ಮುಚ್ಚಲಾಗಿತ್ತು. ಇನ್ನು ಮುಡಿಪು, ಕೂಟತ್ತಜೆ, ತೌಡುಗೋಳಿ, ಪ್ರದೇಶಗಳಲ್ಲೂ ದ.ಕ. ಜಿಲ್ಲಾಡಳಿತ ವತಿಯಿಂದ ಮಣ್ಣು ತೆರವುಗೊಳಿಸಲಾಗಿದೆ.
ತೆರವಾಗಿಲ್ಲ ಸಾರಡ್ಕ ಚೆಕ್ ಪೋಸ್ಟ್:
ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಗಡಿ ಪ್ರದೇಶಗಳನ್ನು ಬಂದ್ ಮಾಡಲಾಗಿದ್ದು, ಅದರಂತೆ, ಸಾರಡ್ಕ ಚೆಕ್ ಪೋಸ್ಟ್ ಅನ್ನು ಬಂದ್ ಮಾಡಲಾಗಿತ್ತು. ಆದರೆ ಕರೋಪಾಡಿ ಗ್ರಾಮದ ಎಲ್ಲಾ ರಸ್ತೆಗಳಲ್ಲಿ ಹಾಕಲಾದ ಮಣ್ಣು ತೆರವುಗೊಳಿಸಲಾಗಿದೆ. ಆದರೆ, ಸಾರಡ್ಕ ಚೆಕ್ ಪೋಸ್ಟ್ ಇನ್ನೂ ತೆರದಿಲ್ಲ.
ಕಾಸರಗೋಡು ಜಿಲ್ಲಾಡಳಿತದಿಂದ ಆದೇಶವಿಲ್ಲ:
ಕೆಲವು ತಿಂಗಳುಗಳ ಹಿಂದೆ ಕೇರಳ ಸರ್ಕಾರವು ತಮ್ಮ ಗಡಿ ಭಾಗದ ರಸ್ತೆಗಳಿಗೆ ಮಣ್ಣು ಹಾಕಿ ಬಂದ್ ಮಾಡಿತ್ತು. ಕೇರಳ ಸರ್ಕಾರ ತೆರವುಗೊಳಿಸಲು ಇನ್ನೂ ಆದೇಶ ನೀಡಿಲ್ಲ. ಈ ಬಗ್ಗೆ ಕೇರಳ ಜಿಲ್ಲಾಡಳಿತಕ್ಕೆ ಗಡಿಭಾಗದ ಜನರು ಮನವಿ ಸಲ್ಲಿಸಿದ್ದಾರೆ.
ಆದರೆ, ಇಲ್ಲಿಯ ತನಕ ಯಾವುದೇ ಆದೇಶ ಹೊರ ಬಿದ್ದಿಲ್ಲ. ಲಾಕ್ ಡೌನ್ ಪ್ರಾರಂಭದಲ್ಲಿ ಗಡಿ ಮುಚ್ಚಿಸುವ ಬಗ್ಗೆಯೂ ಪ್ರಸ್ತಾಪ ಮಾಡಿದ್ದು, ಅದರಂತೆ ಬಂದ್ ಮಾಡಲಾಗಿತ್ತು. ಆದರೆ ಈಗ ರಸ್ತೆ ಬಂದ್ ಮಾಡಿರುವುದನ್ನು ತೆರವುಗೊಳಿಸುವ ಬಗ್ಗೆ ಬಹಳ ದಿನದಿಂದ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮತ್ತು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ವಿನಂತಿಸಿದ್ದು, ಅದರಂತೆ ತೆರವುಗೊಳಿಸಲಾಗಿದೆ.