ಮಂಗಳೂರು, ಆ. 14, (DaijiworldNews/SM): ಅದೊಂದು ಕಾಲವಿತ್ತು. ಆಗಸ್ಟ್ ೧೫ರ ದಿನಕ್ಕಾಗಿ ವಿದ್ಯಾರ್ಥಿ ಸಮೂಹವೇ ಕಾಯುವ ದಿನವಾಗಿತ್ತು. ಆ ವರ್ಷದ ಖರೀಧಿಸಿದ ಹೊಸ ಸಮವಸ್ತ್ರವನ್ನು ಮೊದಲ ಬಾರಿಗೆ ಧರಿಸಿ ಕೈಯಲ್ಲೊಂದು ತ್ರಿವರ್ಣ ಪತಾಕೆ ಹಿಡಿದು, ಆಗಸ್ಟ್ 14ರ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಶಾಲೆ-ಕಾಲೇಜುಗಳತ್ತ ನಡೆಯುವ ಗೌಜಿಯೇ ಭಿನ್ನವಾಗಿತ್ತು.

ಶಾಲೆಗಳಲ್ಲಿ ಧ್ವಜಸ್ಥಂಬ ಅಲಂಕರಿಸುವುದೂ ಸೇರಿದಂತೆ ಬೆಳಗ್ಗೆ 9 ಅಥವಾ 10 ಗಂಟೆಯ ಮುಹೂರ್ತಕ್ಕಾಗಿ ವಿದ್ಯಾರ್ಥಿ ಸಮೂಹವೇ ರೆಡಿಯಾಗುತ್ತಿತ್ತು. ಕೆಲವರಲ್ಲಿ ತ್ರಿವರ್ಣ ಧ್ವಜ ಮತ್ತೆ ಕೆಲವರಲ್ಲಿ ಬ್ಯಾಡ್ಜ್ ಹೀಗೆ ಒಬ್ಬೊಬ್ಬರಲ್ಲಿ ಒಂದೊಂದು ಸ್ವಾತಂತ್ರ್ಯ ದಿನವೆಂದು ಸಾರಿ ಸಾರಿ ಹೇಳುವ ವಸ್ತುಗಳಿರುತ್ತದ್ದವು. ವಿದ್ಯಾರ್ಥಿನಿಯರಂತು ಎರಡು ಜಡೆಗಳನ್ನು ಕಟ್ಟಿ ಮೂರು ರಂಗಿನ ರಿಂಬನ್ ಗಳಿಂದ ಜಡೆ ಶೃಂಗಾರಗೊಳಿಸುತ್ತಿದ್ದರು.
ವಿದ್ಯಾರ್ಥಿಗಳ ಈ ವೇಷಭೂಷಣ ಎಲ್ಲರಿಗೂ ಭಾರತಾಂಬೆ ಪರಕೀಯರ ಕೈಯಡಿಯ ಗುಲಾಮ ತನದಿಂದ ಸೆಟೆದೆದ್ದು ಬಂದ ದಿನವೆಂಬುವುದನ್ನು ನೆನಪಿಸುತ್ತಿತ್ತು. ಈ ಸಂಪ್ರದಾಯ ಮುಂದುವರೆಯುತ್ತಲೇ ಇದೆ. ಆದರೆ, 2020ರ ಸ್ವಾತಂತ್ರ್ಯೋತ್ಸವದ ದಿನ ಮಾತ್ರ ಮಂಕಾಗಿದೆ. ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲರವವಿಲ್ಲ. ಕೊರೊನಾ ಕಾರಣದಿಂದಾಗಿ ಕಳೆದ ಐದು ತಿಂಗಳ ಹಿಂದೆ ಕದ ಮುಚ್ಚಿದ್ದ ಶಾಲೆ-ಕಾಲೇಜುಗಳ ತರಗತಿಗಳ ಬಾಗಿಲುಗಳು ಇನ್ನೂ ಕೂಡ ತೆರೆದುಕೊಂಡಿಲ್ಲ. ವಿದ್ಯಾರ್ಥಿಗಳಿಲ್ಲದೆ ಈ ಬಾರಿಯ ಸಂಭ್ರಮದ ಗತ್ತು ಮಾಯವಾಗಿದೆ.
2020ರ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯನ್ನು ಹತ್ತು ಹಲವು ನಿಬಂಧನೆಗಳೊಂದಿಗೆ ಆಚರಿಸಲಾಗುತ್ತಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ ಆಯೋಜಿಸುವ ಕಾರ್ಯಕ್ರಮಗಳು ಸರಳವಾಗಿವೆ. ನಿರ್ಧಿಷ್ಟ ಸಂಖ್ಯೆಯಲ್ಲಿ ಮಾತ್ರವೇ ಜನರು ಭಾಗವಹಿಸಲು ಅವಕಾಶವಿದೆ. ಕೊರೊನಾ ಎಲ್ಲವನ್ನೂ ನುಂಗಿದ್ದು, ದೇಶ ಪರಕೀಯರ ಕೈಯಿಂದ ಬಿಡುಗಡೆಗೊಂಡು ಸ್ವತಂತ್ರಗೊಂಡ ದಿನದ ಆಡಂಬರವೂ ಇಲ್ಲದಂತಾಗಿದೆ. ಇನ್ನು ಅದರಲ್ಲೂ ಈ ದಿನವನ್ನು ಹೆಚ್ಚು ಸಂಭ್ರಮಿಸುವ ವಿದ್ಯಾರ್ಥಿಗಳು ಕೂಡ, ಈ ದಿನವನ್ನು ಆನಂಧಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳಿಲ್ಲದೆ, ಶಾಲಾ ಕಾಲೇಜುಗಳಲ್ಲಿ ಸರಳವಾಗಿಯೇ ಸ್ವಾತಂತ್ರ್ಯ ದಿನಾಚರಣೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.