ಮಂಗಳೂರು, ಆ 15 (DaijiworldNews/PY): ಕಳೆದ ಮೂರು, ನಾಲ್ಕು ದಿನಗಳಲ್ಲಿ ರಾಜ್ಯ ಕರಾವಳಿ ಪ್ರದೇಶದಲ್ಲಿ ಪ್ರಸಾರವಾಗುತ್ತಿರುವ ನಿಷೇಧಿತ ಸ್ಯಾಟಲೈಟ್ ಫೋನ್ ಕರೆಯ ಸಿಗ್ನಲ್ಗಳು ರವಾನೆಯಾಗುತ್ತಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ದೊರೆತಿವೆ ಎನ್ನುವ ವದಂತಿ ಹಬ್ಬುತ್ತಿವೆ. ಆದರೆ, ಈ ಸುದ್ದಿಯನ್ನು ಪೊಲೀಸ್ ಹಾಗೂ ಗುಪ್ತಚರ ಇಲಾಖೆಗಳು ಖಚಿತಪಡಿಸಿಲ್ಲ.

ಸಾಂದರ್ಭಿಕ ಚಿತ್ರ
ಕಳೆದ ವರ್ಷ ಬೆಳ್ತಂಗಡಿ ತಾಲೂಕಿನಲ್ಲಿ ಹಾಗೂ ಈ ವರ್ಷ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನಲ್ಲಿ ಸ್ಯಾಟಲೈಟ್ ಫೋನ್ ಸಿಗ್ನಲ್ ರವಾನೆಯಾದ ಬಗ್ಗೆ ಮಾಹಿತಿ ದೃಢಪಟ್ಟಿದೆ.
ಗುಪ್ತಚರ ಮೂಲಗಳ ಪ್ರಕಾರ, ಈ ರೀತಿಯಾದ ಸ್ಯಾಟಲೈಟ್ ಫೋನ್ಗಳನ್ನು ಆಳ ಸಮುದ್ರದ ಮೀನುಗಾರಿಕೆಗೆ ಹೋಗುವ ಮೀನುಗಾರರು ಬಳಸುತ್ತಾರೆ. ಇದನ್ನು ತುರಾಯಿ ಎಂದು ಕರೆಯಲಾಗುತ್ತಿದ್ದು, ಈ ಸ್ಯಾಟಲೈಟ್ ಫೋನ್ ಅನ್ನು ಭಾರತದಲ್ಲಿ ಮಾತ್ರವೇ ನಿಷೇಧಿಸಲಾಗಿದೆ. ಭಾರತದ ಗಡಿಯ ಮೂಲಕ ಹಡಗುಗಳು ಹಾದುಹೋಗುವ ಸಂದರ್ಭ ಇಂತಹ ಸಂಕೇತಗಳು ಪ್ರಸಾರವಾಗುವುದು ಸಹಜವಾಗಿದೆ.
ಸ್ಯಾಟಲೈಟ್ ಫೋನ್ಗಳ ಮೂಲಕ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕರೆ ಮಾಡುವ ಸಾಧ್ಯತೆಗಳೂ ಇವೆ. ಆದರೆ, ಇದುವರೆಗೆ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಸ್ಯಾಟಲೈಟ್ ಫೋನ್ಗಳನ್ನು ಬಳಸಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಆದರೆ ಈ ವದಂತಿಗಳನ್ನು ಸಹ ನಿರ್ಲಕ್ಷಿಸಲಾಗುವುದಿಲ್ಲ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.
ಹೊನ್ನಾವರ, ಕುಮಟಾ ಸೇರಿದಂತೆ ಮೈಸೂರು, ಮಂಡ್ಯ ಮತ್ತು ಗೇರುಸೊಪ್ಪೆ ಪ್ರದೇಶಗಳಲ್ಲಿ ಆಗಸ್ಟ್ 10ರಿಂದ 12ರವರೆಗೆ ಸ್ಯಾಟಲೈಟ್ ಫೋನ್ ಮೂಲಕ ಸಂವಾದ ನಡೆಸಿರುವುದಾಗಿ ಹೇಳಲಾಗಿದೆ.