ಉಡುಪಿ, ಆ 15 (DaijiworldNews/HR): ಪಾರಂಪರಿಕವಾಗಿ ಪ್ರತಿ ವರ್ಷವೂ ವಿಜೃಂಭನೆಯಿಂದ ಆಚರಿಸಿಕೊಂಡು ಬರುವ ಗಣೇಶ ಚತುರ್ಥಿ ಆಚರಣೆಯನ್ನು ಈ ಬಾರಿ ಕೊವೀಡ್ ಕಾರಣದಿಂದ ಸರಳವಾಗಿ ಆಚರಿಸುವಂತೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಗಣೇಶೋತ್ಸವ ಹಬ್ಬವನ್ನು ಸಾರ್ವಜನಿಕ ಆಚರಣೆ ಮಾಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿ ಪೂರ್ವಕವಾಗಿ ದೇವಸ್ಥಾನದೊಳಗೆ ಅಥವಾ ತಮ್ಮ ಮನೆಗಳಲ್ಲಿಯೇ ಆಚರಿಸಲು ಅವಕಾಶವಿದ್ದು, ಆದರೆ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ಅವಕಾಶ ಇಲ್ಲ. ಯಾವುದೇ ಕಾರಣಕ್ಕೂ ಸಾರ್ವಜನಿಕ ನದಿ, ಕೆರೆ, ಕೊಳ, ಬಾವಿ ಮತ್ತು ಕಲ್ಯಾಣಿಗಳಲ್ಲಿ ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವಂತಿಲ್ಲ. ಇದಕ್ಕಾಗಿ ಜಿಲ್ಲಾಡಳಿತವಾಗಲಿ ಗ್ರಾಮಪಂಚಾಯಿತಿಯಾಗಲಿ ಯಾವುದೇ ವ್ಯವಸ್ಥೆ ಮಾಡಿರುವುದಿಲ್ಲ. ಮನೆಗಳಲ್ಲಿ ಗಣೇಶ ಪ್ರತಿಷ್ಟಾಪಿಸಿದವರು ಸ್ಥಳೀಯವಾಗಿ ಹತ್ತಿರದ ಬಾವಿ ಅಥವಾ ಕೆರೆಗಳಲ್ಲಿ ವಿಸರ್ಜನೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಮಾರ್ಗಸೂಚಿಯನ್ನು ಮೀರಿ ಯಾರಾದರೂ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆ, ಉತ್ಸವ, ಮೆರವಣಿಗೆ, ಜನ ಸಂದಣಿ ಸೇರಿದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.