ಬೆಳ್ತಂಗಡಿ, ಏ 27: ಮುಂದಿನ ವಿಧಾನಸಭಾ ಚುನಾವಣೆಯ ಸೋಲಿನ ಭಯದಲ್ಲಿರುವ ಬಿಜೆಪಿ ಪಕ್ಷದವರು ಮಾಟ ಮಂತ್ರದ ದಾರಿ ಹಿಡಿದಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.
ಬೆಳ್ತಂಗಡಿಯ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ಬಿಜೆಪಿ ಪಕ್ಷ ಮಾಡುತ್ತಿರುವ ಮಾಟ ಮಂತ್ರಗಳು ಅವರಿಗೇ ತಿರುಗಿ ಬೀಳಲಿದೆ. ರಾಜ್ಯ ಸರಕಾರ ಮಾಡಿರುವ ಸಾಧನೆಗಳು ಕಾಂಗ್ರೆಸ್ ಪಕ್ಷಕ್ಕೆ ಶ್ರೀ ರಕ್ಷೆಯಾಗಿದೆ. ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಚುನಾವಣಾ ಕಣಕ್ಕೆ ಇಳಿದಿದೆ ಎಂದು ತಿಳಿಸಿದರು.
ಬೆಳ್ತಂಗಡಿಯಲ್ಲಿ ಜನಪ್ರಿಯ ನಾಯಕರಾಗಿರುವ ವಸಂತ ಬಂಗೇರ ಅವರನ್ನು ಎದುರಿಸುವ ಶಕ್ತಿ ಬಿಜೆಪಿಗಿಲ್ಲ. ಅದಕ್ಕಾಗಿ ಕಾಂಗ್ರೆಸ್ ಮುಖಂಡರು ಮನೆ ಮುಂದೆ ಮಾಟ ಮಂತ್ರ ಮಾಡುವ ಹೀನ ಮಟ್ಟಕ್ಕೆ ಇಳಿದಿದ್ದಾರೆ. ಈ ರೀತಿ ಕೆಲಸ ಮಾಡುವುದು ಖಂಡನೀಯ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಬಿಜೆಪಿಯಲ್ಲಿ ನಾಯಕರೇ ಇಲ್ಲವಾಗಿದ್ದು ಯಾವ ಸಮೀಕ್ಷೆಯೂ ಅವರ ಪರವಾಗಿ ಬರುತ್ತಿಲ್ಲ. ಎಲ್ಲರೂ ಕಾಂಗ್ರೆಸ್ ಗೆಲುವನ್ನೇ ಹೇಳುತ್ತಿದ್ದಾರೆ. ಬಿಜೆಪಿಯವರು ಯಡಿಯೂರಪ್ಪ ಅವರನ್ನು ಮುಗಿಸುವ ಸಂಚು ನಡೆಸುತ್ತಿದ್ದಾರೆ. ಶ್ರೀರಾಮುಲು ಅವರಂತಹ ಭ್ರಷ್ಟ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವ ಸ್ಥಿತಿ ಬಿಜೆಪಿ ಪಕ್ಷಕ್ಕೆ ಬಂದಿದೆ ಎಂದು ಹೇಳಿದರು.