ಮಂಗಳೂರು, ಆ. 15 (DaijiworldNews/MB) : ಅತ್ಯಪೂರ್ವ ಹಾಗೂ ಗಮನಾರ್ಹವಾದ ಸಾಧನೆಗೈದ ಪ್ರತಿಭೆಗಳನ್ನು ಗುರುತಿಸಿ ,ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಿದಾಗ ಅದು ಅವರ ಮುಂದಿನ. ಸಾಧನೆಯ ಹಾದಿಯಲ್ಲಿ ದೀಪ ಹಚ್ಚಿ ಇಟ್ಟಂತೆ ಎಂದು ನಗರದ ಖ್ಯಾತ ಯೋಗ ಶಿಕ್ಷಕಿ ಶ್ರೀಮತಿ ಕಲಾ ಪದ್ಮನಾಭರವರು ಹೇಳಿದರು.

ಅವರು ಶನಿವಾರ ನಡೆದ ದೇಶದ ಎಪ್ಪತ್ತನಾಲ್ಕನೆಯ ಸ್ವಾತಂತ್ರ್ಯ ಉತ್ಸವದ ಪ್ರಯುಕ್ತ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ವತಿಯಿಂದ ಮಂಗಳೂರಿನ ಲೇಡಿಹಿಲ್ ವೃತ್ತದ ಬಳಿಯಿರುವ ಡಾ|ಎ.ಪಿ.ಜೆ.ಅಬ್ದುಲ್ ಕಲಾಂ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ವಹಿಸಿ ಯುವ ವಿಜ್ಞಾನಿ ಮಾಸ್ಟರ್ ಸಾರ್ಥಕ್ ಪೂಜಾರಿಯವರನ್ನು ಸನ್ಮಾನಿಸಿ ಬಳಿಕ ಮಾತನಾಡಿದ ಅವರು, ನಾವು ಮಾಡುವ ಸನ್ಮಾನ ಸಾಧಕರ ಬೆಳವಣಿಗೆಗೆ ಸಹಕಾರವನ್ನು ನೀಡುವುದಲ್ಲದೆ ಸಮಾಜದ ಸಹಾಯ ಹಸ್ತವೂ ದೊರೆಯುತ್ತದೆ. ಸಾರ್ಥಕ್ ಪೂಜಾರಿ ನಿಜಕ್ಕೂ ಅಭಿನಂದನಾರ್ಹರು ಹಾಗೂ ಅವರು ಸಂಶೋಧನೆ ಮಾಡಿರುವ ರೈತೋಪಯೋಗಿ ಯಂತ್ರ " ಅಗ್ರಿ ಬೋಟ್ " ಕೃಷಿ ಕ್ಷೇತ್ರದಲ್ಲಿ ವಿಶ್ವವಿಖ್ಯಾತವಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಿಸೆಸ್ ಮಂಗಳೂರು ರನ್ನರ್ಸ್ ಅಪ್ ವಿಜೇತೆ ಶ್ರೀಮತಿ ಪ್ರತಿಭಾ ಸಾಲಿಯಾನ್ ಮಾತನಾಡಿ, ಸಮಾಜದಲ್ಲಿ ತೃತೀಯ ಲಿಂಗಿಗಳನ್ನು ಸೇರಿಸಿ ರಾಷ್ಟ್ರೀಯ ಉತ್ಸವವನ್ನು ಆಚರಿಸುತ್ತಿರುವುದು ಹಾಗೂ ಅವರಿಗೆ ಆಹಾರದ ಕಿಟ್ ನೀಡುತ್ತಿರುವುದು ಇಡೀ ನಾಗರಿಕ ಸಮಾಜಕ್ಕೇ ಮಾದರಿ. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಕಾರ್ಯ ಪುಣ್ಯದ ಕೆಲಸ ಎಂದು ಅಭಿನಂದಿಸಿದರು.
ಸ್ಥಳೀಯ ನಗರಪಾಲಿಕಾ ಸದಸ್ಯರಾದ ಶ್ರೀ ಗಣೇಶ್ ಕುಲಾಲ್ ಹಾಗೂ ಶ್ರೀಮತಿ ಸಂಧ್ಯಾ ಆಚಾರ್ ಮಾತನಾಡಿದರು. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸ್ಥಾಪಕ ಶ್ರೀ ಫ್ರ್ಯಾಂಕ್ಲಿನ್ ಮೊಂತೆರೊ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಟರಿ ಕ್ಲಬ್ ಮಂಗಳೂರು ದಕ್ಷಿಣದ ಅಧ್ಯಕ್ಷೆ ಶ್ರೀಮತಿ ನಂದಿನಿ, ಇನ್ನರ್ ವೀಲ್ ಅಧ್ಯಕ್ಷೆ ಶ್ರೀಮತಿ ಪ್ರೇಮಾ ಮುರಳೀಧರ್, ರೋಟರಿ ಮಾಜಿ ಗವರ್ನರ್ ಶ್ರೀ ದಿವಾಕರ್ ಅಮೀನ್, ನವಸಹಜ ಸಮುದಾಯ ಸಂಘಟನೆಯ ಅಧ್ಯಕ್ಷ ಪ್ರವೀಣ್ ಯಾನೆ ನಿಖಿಲಾ, ಆರೆಸೆಸ್ಸ್ ಪ್ರಮುಖರಾದ ಮಾ.ಯೋಗೀಶ್ ಆಚಾರ್ಯ, ಶ್ರೀ ಮೋಹನ್ ಆಚಾರ್ಯ, ಕ್ರೈಸ್ತರ ವೇದಿಕೆಯ ಶ್ರೀ ರಿಚ್ಚಾರ್ಡ್ ರಸ್ಕಿನಾ ಬಿಜೈ, ಕುಮಾರಿ ಸೋನಿಯಾ ಮೊಂತೆರೋ ಬಿಜೈ, ಶ್ರೀಮತಿ ಫ್ರೀಡಾ ಮೊಹಮ್ಮದ್, ಶ್ರೀಮತಿ ಲೋಲಾಕ್ಷಿ ಫೆರ್ನಾಂಡಿಸ್ ಬೊಂದೇಲ್, ಶ್ರೀಮತಿ ಇಂದಿರಾ ಸಿರಿ, ಶ್ರೀಮತಿ ಪ್ರೀತಿ ಕರ್ಕೇರಾ, ಶ್ರೀ ಸತೀಶ್ ಬೋಳಾರ್, ಶ್ರೀಮತಿ ಪ್ರಮೋದಾ ಬೋಳಾರ್, ಮುಂತಾದವರು ಉಪಸ್ಥಿತರಿದ್ದರು. ಮಾಸ್ಟರ್ ಸಾರ್ಥಕ್ ಪೂಜಾರಿಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಮಂಗಳೂರು ದಕ್ಷಿಣದವರ ಸಹಕಾರದಿಂದ ಸುಮಾರು ನೂರು ಮಂದಿಗೆ ಕಿಟ್ ವಿತರಿಸಲಾಯಿತು. ತೃತೀಯ ಲಿಂಗಿ ಬಾಲು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.