ಮಂಗಳೂರು, ಆ 16 (DaijiworldNews/PY): ಮಂಗಳೂರು ನಗರ ಪಾಲಿಕೆ ಚುನಾವಣೆಯ ಸಂದರ್ಭ ನಾವು ನೀಡಿದ ಭರವಸೆಗಳನ್ನು ಮೊದಲ ಹಂತದಲ್ಲಿಯೇ ಪೂರೈಸಿದ್ದೇವೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ನಗರದ ಅಭಿವೃದ್ಧಿಯನ್ನು ವೇಗಗೊಳಿಸಲು ಬಿಜೆಪಿ ಅಭಿವೃದ್ಧಿ ಹಕ್ಕುಗಳ ಪ್ರತ್ಯೇಕ ವರ್ಗಾವಣೆ (ಟಿಡಿಆರ್) ವಿಭಾಗವನ್ನು ತೆರೆಯುವ ಭರವಸೆ ನೀಡಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ವೇಗಗೊಳಿಸಲು ಪ್ರತ್ಯೇಕ ಟಿಡಿಆರ್ ವಿಭಾಗವನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ನಗರ ಪಾಲಿಕೆಯ ಮಿತಿಯಲ್ಲಿ ಘನತ್ಯಾಜ್ಯ ನಿರ್ವಹಿಸುವ ಸೇವಾ ಶುಲ್ಕ ಹಾಗೂ ಕೈಗಾರಿಗೆಗಳಿಂದಲೂ ಅದನ್ನು ಪರಿಷ್ಕರಿಸಲಾಗಿದೆ. ಬಿಜೆಪಿಯು ಆಡಳಿತವನ್ನು ಪಾರದರ್ಶಕವಾಗಿಡಲು ಬದ್ದವಾಗಿದೆ. ನಗರ ಪಾಲಿಕೆಯ ಪ್ರತೀ ವಾರ್ಡ್ನಲ್ಲಿ ವಾರ್ಡ್ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದರು.
ಕಣ್ಣೂರು ಗ್ರಾಮದಲ್ಲಿ ಜಿ+3 ಶೈಲಿಯಲ್ಲಿ 500 ಮನೆಗಳನ್ನು ನಿರ್ಮಿಸಲು ಶೇ.10%ರಷ್ಟು ಅನುದಾನ ನೀಡಲು ಅನುಮತಿ ನೀಡಲಾಗಿದೆ. ಅಲ್ಲದೇ, ಲೇಔಟ್ ಯೋಜನೆಗೆ ಅನುಮತಿ ನೀಡಲಾಗಿದ್ದು, ಇದು ಜಿ+3 ಶೈಲಿಯ 21 ಬ್ಲಾಕ್ಗಳನ್ನು ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು.
ಪದವು ಗ್ರಾಮದಲ್ಲಿ ಜಿ+3 ಶೈಲಿಯ ವಸತಿ ಮನೆಗಳನ್ನು ನಿರ್ಮಿಸುವ ಸಂದರ್ಭ ಉಂಟಾದ ಅಡಚಣೆಯನ್ನು ಈಗ ಸರಿಪಡಿಸಲಾಗಿದೆ. ಅರಣ್ಯ ಇಲಾಖೆಗೆ ಪ್ರತ್ಯೇಕ ಭೂಮಿಯನ್ನು ಒದಗಿಸಲಾಗಿದ್ದು, ಈ ಮೊದಲು ಗುರುತಿಸಿದ ಸ್ಥಳದಲ್ಲಿಯೇ ಈ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸುಮಾರು 65 ಲಕ್ಷ ರೂ.ಗಳ ವೆಚ್ಚದಲ್ಲಿ ಬೋಳೂರು ಸ್ಮಶಾನದಲ್ಲಿರುವ ವಿದ್ಯುತ್ ಶವಾಗಾರದ ಪಕ್ಕದಲ್ಲಿ ಮತ್ತೊಂದು ವಿದ್ಯುತ್ ಶವಾಗಾರವನ್ನು ನಿರ್ಮಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.