ಉಡುಪಿ, ಆ. 16 (DaijiworldNews/MB) : ಕೊರೊನಾ ವಿಪತ್ತಿನಿಂದ ದೇಶದ ನೂರಾರು ಗೋಶಾಲೆಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು ತುರ್ತಾಗಿ ಕನಿಷ್ಠ 200 ಕೋಟಿ ರೂಗಳ ನಿರ್ವಹಣಾ ನಿಧಿಯನ್ನು ನೀಡಬೇಕೆಂದು ಒತ್ತಾಯಿಸಿ ಉಡುಪಿ ಗೋವರ್ಧನ ಗಿರಿ ಟ್ರಸ್ಟ್ ( ರಿ) ಅಧ್ಯಕ್ಷ , ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ಗೆ ಪತ್ರ ಬರೆದಿದ್ದಾರೆ.

ಕಳೆದ ಆರೇಳು ತಿಂಗಳುಗಳಿಂದ ಕೊರೊನಾದಿಂದಾಗಿ ವಿವಿಧ ಕ್ಷೇತ್ರಗಳು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಂತೆಯೇ ದೇಶದ ಗೋಶಾಲೆಗಳೂ ತೊಂದರೆಗೊಳಗಾಗಿವೆ. ಗೋಶಾಲೆಗಳ ನಿರ್ವಹಣೆ ಅತ್ಯಂತ ವೆಚ್ಚದಾಯಕವಾಗಿದೆ. ಉಡುಪಿಯಲ್ಲಿ ನೀಲಾವರ ಕೊಡವೂರು ಹೆಬ್ರಿಯಲ್ಲಿ ನಾವು ನಡರಸುತ್ತಿರುವ ಗೋಶಾಲೆಗಳಿಗೆ ಮಾಸಿಕ ಅಂದಾಜು 35 ಲಕ್ಷ ರೂ ನಿರ್ವಹಣಾ ವೆಚ್ಚ ಇದೆ. ಅದೇ ರೀತಿಯಲ್ಲಿ ಇದಕ್ಕೂ ದೊಡ್ಡ ಅಥವಾ ಸಣ್ಣ ಮಟ್ಟದ ಗೋಶಾಲೆಗಳನ್ನು ಅನೇಕ ಮಠ ದೇವಳ ಹಾಗೂ ಮಹನೀಯರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕರ್ತವ್ಯದ ದೃಷ್ಟಿಯಿಂದ ನಡೆಸುತ್ತಾ ಲಕ್ಷಾಂತರ ಗೋವುಗಳನ್ನು ಪೋಷಿಸುತ್ತಿದ್ದಾರೆ. ಧರ್ಮಾಭಿಮಾನಿಗಳ ಸಹಕಾರದಿಂದ ಇದು ಸಾಧ್ಯವಾಗುತ್ತಿತ್ತು. ಆದರೆ ಪ್ರಸ್ತುತ ಭಕ್ತರ ದೇಣಿಗೆಯೂ ಅಷ್ಟಾಗಿ ಬರುತ್ತಿಲ್ಲ. ಮೇಲಾಗಿ ಎರಡು ತಿಂಗಳಿನಿಂದ ದೇಶದ ಕೆಲವೆಡೆಗಳಲ್ಲಿ ವಿಪರೀತ ಮಳೆಯೂ ಸುರಿಯುತ್ತಿರುವುದರಿಂದ ಮೇವಿನ ಸಂಗ್ರಹಣೆಯೂ ದುಸ್ತರವಾಗುತ್ತಿದೆ.
ಆದ್ದರಿಂದ ಕೊರೊನಾ ವಿಪತ್ತನ್ನು ಎದುರಿಸಲು ಬೇರೆ ಬೇರೆ ಕ್ಷೇತ್ರಗಳಿಗೆ ಸರಕಾರವು ಆರ್ಥಿಕ ಪ್ಯಾಕೇಜ್ ಘೋಷಿಸಿದಂತೆ ಗೋಶಾಲೆಗಳಿಗೂ ಕನಿಷ್ಠ 200 ಕೋಟಿಯಾದರೂ ತುರ್ತಾಗಿ ನೀಡಿ ಗೋರಕ್ಷಣೆಯ ಕೈಂಕರ್ಯದಲ್ಲಿ ಕೈಜೋಡಿಸಬೇಕು. ಕೇವಲ ಧರ್ಮಮಾತ್ರವಲ್ಲದೇ ಆರ್ಥಿಕತೆಯ ಹಿತದೃಷ್ಟಿಯಿಂದಲೂ ಗೋರಕ್ಷಣೆಯನ್ನು ಆದ್ಯತೆಯಾಗಿ ಪರಿಗಣಿಸಬೇಕೆಂದು ಪೇಜಾವರ ಶ್ರೀಗಳು ಒತ್ತಾಯಿಸಿದ್ದಾರೆ.