ಮಂಗಳೂರು, ಆ (DaijiworldNews/HR): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ - ಕೇರಳ ರಾಜ್ಯದ ಕಾಸರಗೋಡು ಗಡಿಭಾಗದಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಆದೇಶಿಸಲಾಗಿತ್ತು. ಇದೀಗ ದ.ಕ. ಜಿಲ್ಲಾಡಳಿತವು ಕಾಸರಗೋಡು ಗಡಿಭಾಗದಿಂದ ಸಂಚರಿಸುವ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ.

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಆದೇಶ ಹೊರಡಿಸಿದ್ದು, ದೈನಂದಿನ ಚಟುವಟಿಕೆಗಳಿಗೆ ಪ್ರತಿ ದಿನ ಸಂಚರಿಸುವ ಸಾರ್ವಜನಿಕರು ಸ್ಥಳೀಯ ಗ್ರಾಮ ಪಂಚಾಯತ್ ವತಿಯಿಂದ ಮಾಸಿಕ ಪಾಸ್ ಪಡೆದು ಪಾಸನ್ನು ಚೆಕ್ ಪೋಸ್ಟ್ ಗಳಲ್ಲಿ ತಮ್ಮ ಮಾಹಿತಿಯನ್ನು ದಾಖಲಿಸಿ, ಚೆಕ್ ಪೋಸ್ಟ್ ಗಳಲ್ಲಿ ಪ್ರತಿದಿನ ವೈದ್ಯಕೀಯ ಸ್ಕ್ರೀನಿಂಗ್ ಹಾಗೂ ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು.
ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳಿಯಲು ಇಚ್ಚಿಸುವ ಸಾರ್ವಜನಿಕರು ಕಡ್ಡಾಯವಾಗಿ ಸೇವಾ ಸಿಂಧೂ ವೆಬ್ ಪೋರ್ಟಲ್ ನಲ್ಲಿ ಪಾಸ್ ಪಡೆದು ತಲಪಾಡಿ ಅಥವಾ ಜಾಲ್ಸೂರು ಚೆಕ್ ಪೋಸ್ಟ್ ಮುಖಾಂತರವೇ ಸಂಚರಿಸಬೇಕು.
ಇನ್ನು ಕರ್ನಾಟಕ ಸರ್ಕಾರದ ಕೋವಿಡ್ 19ನ ಕ್ವಾರಂಟೈನ್ ಮಾರ್ಗಸೂಚಿಗೆ ಬದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇನ್ನು ಓಣಂ ಹಬ್ಬದ ಹಿನ್ನಲೆಯಲ್ಲಿ ಆಗಸ್ಟ್ 25ರಿಂದ ಸೆಪ್ಟೆಂಬರ್ 6ರ ತನಕ ಕರ್ನಾಟಕಕ್ಕೆ ಬಸ್ ಸಂಚಾರ ನಡೆಸುವುದಾಗಿ ಕೇರಳ ಸಾರಿಗೆ ಇಲಾಖೆ ಘೋಷಣೆ ಮಾಡಿದೆ. ಈ ಬಸ್ಗಳಲ್ಲಿ ಸಂಚಾರ ನಡೆಸುವ ಜನರು ಕಡ್ಡಾಯವಾಗಿ ಕೇರಳ ರಾಜ್ಯದ ಜಾಗೃತ್ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಸಿಕೊಂಡು ಪ್ರಯಾಣಿಕ ಪಾಸು ಪಡೆಯಬೇಕು ಎಂದು ಕೇರಳದ ಸಾರಿಗೆ ಸಚಿವ ಎ. ಕೆ. ಸಸೀಂದ್ರನ್ ಹೇಳಿದ್ದಾರೆ.