ಕಾಸರಗೋಡು, ಆ. 16 (DaijiworldNews/MB) : ಐಸ್ ಕ್ರೀಮ್ನಲ್ಲಿ ವಿಷ ಬೆರೆಸಿ ಸಹೋದರಿಯನ್ನು ಕೊಲೆಗೈದ ಆರೋಪಿಯ ಪ್ರೇಯಸಿ ಮತ್ತು ಸ್ನೇಹಿತರನ್ನು ವಿಚಾರಣೆ ನಡೆಸಲು ತನಿಖಾ ತಂಡ ತೀರ್ಮಾನಿಸಿದೆ.

ಆರೋಪಿ ಆಲ್ಬಿನ್ ಹಾಗೂ ಮೃತ ಸಹೋದರಿ ಆನ್ ಮೇರಿ
ಬಳಾಲ್ ಆರಿಂಗಲ್ನ ಆನ್ ಮೇರಿ ( 16) ಯನ್ನು ಕೊಲೆಗೈದ ಸಹೋದರ ಆಲ್ಬಿನ್ ( 22) ನ ಪ್ರೇಯಸಿ ಮತ್ತು ಸ್ನೇಹಿತರಿಂದ ಪೊಲೀಸರು ಮಾಹಿತಿ ಕಲೆ ಹಾಕಲಿದ್ದಾರೆ.
ಕುಟುಂಬದವರನ್ನು ಕೊಲೆಗೈದು ಆಸ್ತಿಯನ್ನು ಮಾರಾಟ ಮಾಡಿ ಪ್ರೇಯಸಿ ಜೊತೆ ಐಷಾರಾಮಿ ಜೀವನ ನಡೆಸಲು ಕೃತ್ಯ ನಡೆಸಿದ್ದಾಗಿ ಆಲ್ಬಿನ್ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಇದೀಗ ಈ ಕೃತ್ಯದಲ್ಲಿ ಬೇರೆ ಯಾರಾದಾದರೂ ಕೈವಾಡ ಇದೆಯೇ ಎಂಬ ಬಗ್ಗೆ ಮಾಹಿತಿ ಪಡೆಯಲು ತನಿಖೆ ನಡೆಯಲಿದೆ.
ಆಲ್ಬಿನ್ನ ನಡವಳಿಕೆಯಿಂದಾಗಿ ಸ್ನೇಹಿತರು ಮನೆಗೆ ಬರುವುದನ್ನು ಮನೆಯವರು ವಿರೋಧಿಸಿದ್ದರು. ಇದರಿಂದ ಕೃತ್ಯದಲ್ಲಿ ಸ್ನೇಹಿತರು ಹಾಗೂ ಪ್ರೇಯಸಿಯ ಕೈವಾಡ ಬಗ್ಗೆ ತನಿಖೆ ನಡೆಯುತ್ತಿದೆ.
ಕೃತ್ಯ ನಡೆಸುವ ಕುರಿತು ಈತ ವಾರಗಳಿಂದ ಗೂಗಲ್ನಲ್ಲಿ ಸರ್ಚ್ ಮಾಡಿರುವುದಾಗಿ ಸೈಬರ್ ಸೆಲ್ ನಡೆಸಿದ ತನಿಖೆಯಿಂದ ಸ್ಪಷ್ಟಗೊಂಡಿದೆ.
ಆಗಸ್ಟ್ ಐದರಂದು ಬೆನ್ನಿ - ಬೆಸ್ಸಿ ದಂಪತಿ ಪುತ್ರಿ ಆನ್ ಮೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಜುಲೈ 31 ರಂದು ಮನೆಯಲ್ಲಿ ತಯಾರಿಸಿದ್ದ ಐಸ್ ಕ್ರೀಮ್ ಸೇವಿಸಿದ್ದ ಆನ್ ಮೇರಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 5 ರಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಐಸ್ ಕ್ರೀಮ್ ಸೇವಿಸಿದ್ದ ಬೆನ್ನಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.