ಕುಂದಾಪುರ, ಆ. 17 (DaijiworldNews/MB) : ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿ 7 ಮೀನುಗಾರರನ್ನು ರಕ್ಷಿಸಿದ ಘಟನೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿಯಲ್ಲಿ ರವಿವಾರ ಮಧ್ಯಾಹ್ನ ನಡೆದಿದ್ದು ಈ ಪೈಕಿ ಓರ್ವ ವ್ಯಕ್ತಿಯ ಮೃತ ದೇಹ ಸೋಮವಾರ ಪತ್ತೆಯಾಗಿದೆ.






ಪತ್ತೆಯಾದ ಮೃತದೇಹವನ್ನು ಮೀನುಗಾರ ನಾಗ ಖಾರ್ವಿಯದ್ದು ಎಂದು ಗುರುತಿಸಲಾಗಿದ್ದು ಇತರೆ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಭಾನುವಾರ ಸಾಗರಶ್ರೀ ಎಂಬ ಮೀನುಗಾರಿಕಾ ನಾಡದೋಣಿಯಲ್ಲಿ ಒಟ್ಟು 11ಮಂದಿ ಮೀನುಗಾರರು ಇದ್ದು ಮೀನುಗಾರಿಕೆಗೆ ತೆರಳಿ ವಾಪಸವಾಗುತ್ತಿದ್ದ ವೇಳೆ ಕೊಡೇರಿ ಸಮೀಪ ಸಮುದ್ರದ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿತ್ತು. ನಿಯಂತ್ರಣ ಕಳೆದುಕೊಂಡ ದೋಣಿ ಕಲ್ಲಿನ ಗೋಡೆಗೆ ಢಿಕ್ಕಿ ಹೊಡೆದು ದೋಣಿ ಪಲ್ಟಿಯಾದ ಪರಿಣಾಮ ನಾಲ್ವರು ಮೀನುಗಾರರು ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಇದೀಗ ಈ ಪೈಕಿ ಒಬ್ಬರ ಮೃತ ದೇಹ ಪತ್ತೆಯಾಗಿದ್ದು ಇತರೆ ಮೂವರು ಮೀನುಗಾರರಾದ ಶೇಖರ, ಲಕ್ಷ್ಮಣ, ಮಂಜುನಾಥ ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಇನ್ನುಳಿದ 7 ಮೀನುಗಾರರನ್ನು ಭಾನುವಾರ ರಕ್ಷಣೆ ಮಾಡಲಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಳೀಯರ ಸಹಕಾರದಿಂದ ದೋಣಿಯನ್ನು ದಡಕ್ಕೆ ತರಲಾಗಿತ್ತು.