ಮಂಗಳೂರು, ಏ 27: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಇದೇ ಮೊದಲ ಬಾರಿಗೆ ಜಿಲ್ಲಾಮಟ್ಟದಲ್ಲಿ ಬಿಡುಗಡೆ ಮಾಡಿದ್ದಾರೆ.
ಅತೀ ಜತನದಿಂದ ತಯಾರಿಸಿರುವ ಚುನಾವಣಾ ಪ್ರಣಾಳಿಕೆ ಇದಾಗಿದ್ದು, ನಗರದ ಟಿಎಂಎಪೈ ಹಾಲ್ ನಲ್ಲಿ ಕೈ ಪ್ರಣಾಳಿಕೆ ಬಿಡುಗಡೆಯಾಗಿದೆ.
ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ರಾಹುಲ್ ಗಾಂಧಿ, ಕೈ ಪ್ರಣಾಳಿಕೆ ಬಿಡುಗಡೆ ಮಾಡಲು ನನಗೆ ಸಂತಸವಾಗುತ್ತಿದೆ. ಈ ಪ್ರಣಾಳಿಕೆ ಕೇವಲ ಕೆಲವರಷ್ಟೇ ಕುಳಿತು ಮಾಡಿದ ಪ್ರಣಾಳಿಕೆಯಲ್ಲ. ಇದು ಕರ್ನಾಟಕ ಜನತೆಯ ಧ್ವನಿಯಾಗಿದೆ. ಇದು ಕೇವಲ ಪ್ರಣಾಳಿಕೆಯಾಗಿರದೆ, ಜನರ ಭಾವನೆ, ಆಶಯ ಸಂಗ್ರಹ ಈ ಪ್ರಣಾಳಿಕೆಯಲ್ಲಿದೆ. ಕರ್ನಾಟಕದ ಜನರ ಬಳಿ ತೆರಳಿ ಆಶಯ ಸಂಗ್ರಹಿಸಿ ಪ್ರಣಾಳಿಕೆ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಬಿಡುಗಡೆಗೊಂಡಿರುವ ಪ್ರಣಾಳಿಕೆಯಲ್ಲಿ ಶೇ.90 ರಷ್ಟು ಭರವಸೆಯನ್ನು ಈಡೇರಿಸಿದ್ದೇವೆ. ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ರಾಜ್ಯದ ಜನರ ಮನ್ ಕೀ ಬಾತ್. ನಾವು ಬಸವಣ್ಣನವರ ಸಿದ್ಧಾಂತವನ್ನು ನಂಬುವವರು. ಬಸವಣ್ಣ ಹೇಳಿದಂತೆ, ನಾವು ನುಡಿದಂತೆ ನಡೆದಿದ್ದೇವೆ. ಎಲ್ಲಾ ಜಿಲ್ಲೆಗೆ ತೆರಳಿ, ಎಲ್ಲಾ ವರ್ಗದ ಜನರ ಆಶಯದಂತೆ ಈ ಬಾರಿ ಪ್ರಣಾಳಿಕೆ ತಯಾರಿಸಿದ್ದೇವೆ ಎಂದು ತಿಳಿಸಿದರು.
ಮೋದಿ ಬಸವಣ್ಣನವರ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಬಸವಣ್ಣನವರ ಸಿದ್ಧಾಂತಕ್ಕೆ ವಿರುದ್ಧವಾಗಿದ್ದಾರೆ. ಬಿಜೆಪಿ ಪ್ರಣಾಳಿಕೆ ಜನರ ಭಾವನೆಯನ್ನು ಪ್ರತಿನಿಧಿಸುವುದಿಲ್ಗ. ಬದಲಿಗೆ ಅದು ಆರ್.ಎಸ್.ಎಸ್ ಪರವಾಗಿರುವ ಪ್ರಣಾಳಿಕೆ. ಬಿಜೆಪಿಯ ಪ್ರಣಾಳಿಕೆಯನ್ನು ಕೇವಲ 3-4 ಜನ ತಯಾರಿಸಿದ್ದಾರೆ. ಪ್ರಣಾಳಿಕೆಯ ಒಳಗೆ ಭ್ರಷ್ಟಾಚಾರವಿದೆ. ಅಲ್ಲಿ ರೆಡ್ಡಿ ಸಹೋದರರ ಹಿತಾಸಕ್ತಿ ಇದೆ. ಅದರಲ್ಲಿ ಆರ್.ಎಸ್.ಎಸ್ ಸಿದ್ಧಾಂತವೂ ಸೇರಿಕೊಂಡಿದೆ. ಆದರೆ ನಾವು ಹಾಗಲ್ಲ. ನಾವು ಜನರನ್ನು ಕೇಳಿ ಪ್ರಣಾಳಿಕೆಯನ್ನು ರಚಿಸುತ್ತೇವೆ. ಇದು ನಮಗೂ ನಮ್ಮ ವಿರೋಧಿಗಳಿಗೂ ಇರುವ ವ್ಯತ್ಯಾಸ ಎಂದು ಹೇಳಿದ್ದಾರೆ.
ಪ್ರಣಾಳಿಕೆಗಾಗಿ 15 ಮಂದಿಯ ತಂಡ 4 ತಿಂಗಳು ಶ್ರಮ ವಹಿಸಿದ್ದು, ಈ ಪ್ರಣಾಳಿಕೆಯಲ್ಲಿ ರಾಜ್ಯದ ಸರ್ವ ಜನರ ಸರ್ವಾಂಗೀಣ ಅಭಿವೃದ್ಧಿ, ರಾಜ್ಯದ ಸಮಗ್ರ ಅಭಿವೃದ್ಧಿ, ಯುವಕರಿಗೆ ಉದ್ಯೋಗ , ಮಹಿಳೆಯರ ರಕ್ಷಣೆ, ಶಿಕ್ಷಣ, ಆರೋಗ್ಯ, ಪರಿಸರ ರಕ್ಷಣೆ, ಶುಚಿತ್ವ, ಮೂಲಭೂತ ಸೌಕರ್ಯ ಇನ್ನಿತರ ಅತ್ಯಂತ ಪ್ರಮುಖ ವಿಚಾರಗಳ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಾಮುಖ್ಯತೆ ನೀಡಲಾಗಿದೆ.
ಈ ವೇಳೆ ಸಿಎಂ ಸಿದ್ದರಾಮಯ್ಯ, ಹಿರಿಯ ಮುಖಂಡ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಮೊದಲಾದವರು ಉಪಸ್ಥಿತರಿದ್ದರು.