ಮಂಗಳೂರು, ಆ. 17 (DaijiworldNews/MB) : ಆಗಸ್ಟ್ 22 ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತಿದ್ದು ಕಲಾವಿದರು ಗಣೇಶನ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.








ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ ಅವರು ಭಾನುವಾರ ಮಾರ್ಗಸೂಚಿ ಹೊರಡಿಸಿದ್ದು ಸಾರ್ವಜನಿಕವಾಗಿ ಗಣೇಶೋತ್ಸವ ಮಾಡುವಂತಿಲ್ಲ ಎಂದು ಹೇಳಿದ್ದಾರೆ.
ಹಾಗೆಯೇ ಹಬ್ಬವನ್ನು ಸರಳವಾಗಿ ಮನೆ ಅಥವಾ ದೇವಾಲಯಗಳ ಒಳಗೆ ಆಚರಿಸಬೇಕು ಹೊರತು ಸಾರ್ವಜನಿಕವಾಗಿ ಆಚರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಗ್ರಹಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂತಿ ಪ್ರತಿಷ್ಟಾಪನೆ ಮಾಡಲು ಅವಕಾಶವಿಲ್ಲ. ಹಾಗೆಯೇ ಸಾರ್ವಜನಿಕ ನದಿ, ಕೆರೆ, ಬಾವಿ, ಕೊಳ ಹಾಗೂ ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವಂತಿಲ್ಲ. ಇನ್ನು ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಮಾಡುವಂತಿಲ್ಲ. ಹಾಗೆಯೇ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿಗಳನ್ನು ಅವರ ಮನೆ ಆವರಣದಲ್ಲಿಯೇ ವಿಸರ್ಜನೆ ಮಾಡಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.
ನಗರದ ರಥಬೀದಿ ಹಾಗೂ ಮಣ್ಣಗುಡ್ಡೆಯಲ್ಲಿ ವಿವಿಧ ಆಕಾರ ಹಾಗೂ ಗಾತ್ರದ ಗಣೇಶ ವಿಗ್ರಹಗಳನ್ನು ಸಿದ್ದ ಪಡಿಸಲಾಗುತ್ತಿದ್ದು ಕಲಾವಿದರು ಗಣೇಶನ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುವುದರಲ್ಲಿ ನಿರತರಾಗಿದ್ದಾರೆ.
ಇನ್ನು ಹಲವರು ಕೊರೊನಾ ನಿರ್ಬಂಧಗಳನ್ನು ತೆಗೆದು ಹಾಕಲಾಗುತ್ತದೆ ಎಂದು ತಿಳಿದು ಮುಂಚಿತವಾಗಿ ವಿಗ್ರಹಗಳನ್ನು ಕಾಯ್ದಿರಿಸಿದ್ದು ಈಗ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅವಕಾಶವಿಲ್ಲದ ಕಾರಣ ವಿಗ್ರಹ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಗಣೇಶೋತ್ಸವದಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಆದರೆ ಈ ವರ್ಷ ಕೊರೊ ಆ ಕಾರಣದಿಂದಾಗಿ ಜಿಲ್ಲಾಡಳಿತವು ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ವಿಧಿಸಿದೆ.
ಇನ್ನು ಧಾರ್ಮಿಕ ಮುಖಂಡರು ಈ ಹಬ್ಬವನ್ನು ಮುಂದಿನ ಫೆಬ್ರವರಿ ತಿಂಗಳಲ್ಲಿ ಅದ್ದೂರಿಯಾಗಿ ಆಚರಿಸುವ ಸಲಹೆ ನೀಡಿದ್ದಾರೆ ಎನ್ನಲಾಗಿದೆ.