ಮಂಗಳೂರು, ಏ 27: ಕೋಮು ಗಲಭೆಯನ್ನು ಮೆಟ್ಟಿ ನಿಂತ ಕರಾವಳಿಯ ಜನತೆಗೆ ಸಿಎಂ ಸಿದ್ದರಾಮಯ್ಯ ಕೋಟಿ ನಮನಗಳನ್ನು ತಿಳಿಸಿದ್ದಾರೆ.
ನಗರದ ಟಿಎಂಎಪೈ ಹಾಲ್ ನಲ್ಲಿ ನಡೆದ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಸಂದರ್ಭ ಮಾತನಾಡಿದ ಅವರು, ದ.ಕ ಮತ್ತು ಉಡುಪಿಯನ್ನು ಬಿಜೆಪಿ ಪ್ರಯೋಗ ಶಾಲೆ ಮಾಡಿಕೊಂಡಿದೆ. ನಮ್ಮ ಸರ್ಕಾರವಿರುವಾಗ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಅನ್ನುವ ಆರೋಪ ನಮ್ಮ ಮೇಲಿದೆ. ಒಟ್ಟು 11 ಮಂದಿ ಕಾರ್ಯಕರ್ತರ ಹತ್ಯೆಯಾಗಿದೆ. ಆದರೆ ಬಿಜೆಪಿ 23 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಹೇಳ್ತಾರೆ. ಈ ಮೂಲಕ ಕೋಮು ಗಲಭೆಗೆ ಜಿಲ್ಲೆಯಲ್ಲಿ, ರಾಜ್ಯದಲ್ಲಿ ಬಿಜೆಪಿ ನಾಯಕರು ಪ್ರಚೋದನೆ ನೀಡುತ್ತಿದ್ದಾರೆ. ಆದರೆ ಕರಾವಳಿಯ ಜನ ಇವೆಲ್ಲವನ್ನು ಮೆಟ್ಟಿ ನಿಂತವರು. ಇದಕ್ಕಾಗಿ ಕರಾವಳಿಗರಿಗೆ ನನ್ನ ಕೋಟಿ ನಮನಗಳು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಮುಂದಿನ 5 ವರುಷಗಳಲ್ಲಿ ನಮ್ಮ ಪಕ್ಷದ ಬದ್ಧತೆ ಏನು ಅನ್ನೊದನ್ನು ತಿಳಿಸುತ್ತೇವೆ. ಜನತೆಗೆ ಕೊಟ್ಟ ಭರವಸೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ಈ ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತೇವೆ ಎಂದು ಭರವಸೆ ನೀಡಿದರು.
ಕರ್ನಾಟಗ ಮಾದರಿ ಸರ್ಕಾರವನ್ನು ಕೇಂದ್ರ ಅನುಸರಿಸುತ್ತಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸುಧಾರಿಸಿದೆ. ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ ನಂಬರ್ -1 ಪಟ್ಟಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಹಿರಿಯ ಮುಖಂಡ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಮೊದಲಾದವರು ಉಪಸ್ಥಿತರಿದ್ದರು.