ಸುಳ್ಯ, ಆ 17 (DaijiworldNews/PY): ಮುಜಾರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ಪುನಃ ಸೇವೆಗಳನ್ನು ಆರಂಭಿಸುವಂತೆ ಭಕ್ತರಿಂದ ನಿರಂತರವಾಗಿ ಬೇಡಿಕೆ ಇದ್ದು, ಕುಂಕುಮಾರ್ಚನೆ, ಅಭಿಷೇಕಾ ಮುಂತಾದ ಕೆಲವು ಸೇವೆಗಳನ್ನು ಪುನಃ ಆರಂಭಿಸಲು ನಾವು ಚಿಂತನೆ ನಡೆಸಿದ್ದೇವೆ. ಎಂದು ಮುಜರಾಯಿ ಸಚಿವ ಶ್ರೀನಿವಾಸ ಪೂಜಾರಿ ಹೇಳಿದರು.

ಸುಳ್ಯ ತಾಲೂಕಿನ ಆದರ್ಶ ಗ್ರಾಮವಾದ ಬಳ್ಪದ ಎಣ್ಣೆಮಜಲಿಗೆ ಭೇಟಿ ನೀಡಿದ್ದ ಸಂದರ್ಭ ಮಾತನಾಡಿದ ಅವರು, ದೇವಾಲಯಗಳಲ್ಲಿ ಪುನಃ ಸೇವೆಗಳನ್ನು ಆರಂಭಿಸುವಂತೆ ಭಕ್ತರ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಕೆಲವು ಸೇವೆಗಳನ್ನು ಪುನಃ ಆರಂಭಿಸಲು ನಾವು ಚಿಂತನೆ ನಡೆಸಿದ್ದೇವೆ. ಈ ವಿಚಾರವಾಗಿ ನಾವು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇವೆ. ಅವರು ಅನುಮತಿ ನೀಡಿದ್ದಲ್ಲಿ ಈ ಸೇವೆಗಳನ್ನು ಒಂದು ವಾರದಲ್ಲಿ ಪ್ರಾರಂಭಿಸಲಾಗುವುದು ಎಂದರು.
ರಾಜ್ಯದ ಎ ವರ್ಗಕ್ಕೆ ಸೇರುವ 80ಕ್ಕೂ ಹೆಚ್ಚು ದೇವಾಲಯಗಳಿಗೆ ರಾಜ್ಯ ಧಾರ್ಮಿಕ ಮಂಡಳಿಯ ಮೂಲಕ ವ್ಯವಸ್ಥಾಪನಾ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ. ಸಮಿತಿಗಳ ಸದಸ್ಯರಾಗಲು ಅರ್ಜಿ ಸಲ್ಲಿಸಿದವರಿಗೆ ಸಂಬಂಧಿಸಿದಂತೆ ಪೊಲೀಸ್ ಪರಿಶೀಲನೆ ಮತ್ತು ಇತರ ವಿಷಯಗಳ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲು ಕೆಲವು ಸಲಹೆಗಳಿವೆ. ಆದರೆ, ಇತರರು ವ್ಯವಸ್ಥಾಪನಾ ಸಮಿತಿ ಸಾಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಶೀಘ್ರದಲ್ಲೇ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.