ಮಂಗಳೂರು, ಏ 27: ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ಸಿಗ ಬಿ.ಜನಾರ್ದನ ಪೂಜಾರಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ, ಅದನ್ನೆಲ್ಲಾ ಬದಿಗಿಟ್ಟು ಚುನಾವಣೆಯ ಬಗ್ಗೆ ಗಮನ ಹರಿಸಿ ಇಂದು ನಡೆದ ಕೈ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ನಗರದ ಟಿಎಂಎಪೈ ಹಾಲ್ ನಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಮಟ್ಟದ ಕಾಂಗ್ರೆಸ್ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ 5 ವರುಷದ ಸಾಧನೆಯ ಬಗ್ಗೆ ಈ ಪ್ರಣಾಳಿಕೆಯಲ್ಲಿ ವಿವರಿಸಲಾಗಿದೆ. ರಾಹುಲ್ ಕೈ ಪ್ರಣಾಳಿಕೆ ಬಿಡುಗಡೆ ಮಾಡುವ ಮೊದಲು ಮೊದಲ ಪ್ರತಿಯನ್ನು ಪೂಜಾರಿ ಕೈಗೆ ನೀಡಿದ್ದಾರೆ. ಬಳಿಕ ಕಾಂಗ್ರೆಸ್ ಪ್ರಣಾಳಿಕೆಯನ್ನು ರಾಹುಲ್ ಬಿಡುಗಡೆ ಮಾಡಿದ್ದಾರೆ.
ಸಿದ್ದರಾಮಯ್ಯರನ್ನು ಸದಾ ಟೀಕಿಸುತ್ತಾ ಬಂದಿರುವ ಜನಾರ್ಧನ ಪೂಜಾರಿ ಪಕ್ಷದ ಬಗ್ಗೆ ಹಲವಾರು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಾತ್ರವಲ್ಲ ರಾಹುಲ್ ಮಂಗಳೂರು ಭೇಟಿ ಸಂದರ್ಭ ರಾಜ್ಯ ಕಾಂಗ್ರೆಸ್ ತನ್ನೊಂದಿಗೆ ವರ್ತಿಸುತ್ತಿರುವ ರೀತಿಯ ಬಗ್ಗೆ ತಮ್ಮ ಅಳಲನ್ನು ಹೇಳಿಕೊಂಡಿದ್ದರು. ನಂತರ ಪೂಜಾರಿಗೆ ರಾಹುಲ್ ಸೂಕ್ತ ಸ್ಥಾನಮಾನ ನೀಡುವ ಕುರಿತು ಭರವಸೆಯನ್ನೂ ಕೂಡ ನೀಡಿದ್ದರು. ಅದರಂತೆ, ಕೈ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಪೂಜಾರಿಯವರನ್ನು ಆಹ್ವಾನಿಸಿದ್ದು, ಕಾರ್ಯಕರ್ತರು ಜೈಕಾರ ಹಾಕಿ ಅವರನ್ನು ಸ್ವಾಗತಿಸಿದ್ದಾರೆ.
ಕಾಂಗ್ರೆಸ್ ಮತ್ತು ಜನಾರ್ದನ ಪೂಜಾರಿ ಮಧ್ಯೆ ಬಿರುಕು ಇದೆ ಎಂದು ಹೇಳಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲ ರಾಜಕಾರಣಿಗಳಿಗೆ ಈ ಬೆಳವಣಿಗೆಯಿಂದ ಮರ್ಮಾಘಾತವಾಗಿದೆ. ಪೂಜಾರಿ ಅವರ ಬೆಂಬಲದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಉತ್ಸಾಹ ಮತ್ತಷ್ಟು ಹೆಚ್ಚಾಗಿದೆ.