ಮಂಗಳೂರು, ಆ.17 (DaijiworldNews/HR):ತುಳು ಭಾಷೆಯು ಲಕ್ಷಾಂತರ ಜನರ ಮಾತೃಭಾಷೆಯಾಗಿದೆ. ಅದಾಗಿಯೂ ಈ ಭಾಷೆಗೆ ಅರ್ಹವಾದ ಮನ್ನಣೆ ಮತ್ತು ಸ್ಥಾನಮಾನವನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ. ತುಳುನಾಡಿನ ಮಕ್ಕಳು ತುಳು ಭಾಷೆಯಲ್ಲಿ ಶಿಕ್ಷಣ ಪಡೆಯಬೇಕೆಂದು ಜೈ ತುಳುನಾಡು ಸಂಘಟನೆಯು ಅಭಿಯಾನವನ್ನು ಆರಂಭಿಸಿದೆ.

ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು, ತುಳು ಭಾಷೆಯನ್ನು ಕೂಡ ‘ನೂತನ ಶಿಕ್ಷಣ ನೀತಿ-2020’ರಡಿಯಲ್ಲಿ ಸೇರಿಸುವ ಬಗೆಗೆ ಮನವಿ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಗಮನ ಸೆಳೆಯಲು ಜೈ ತುಳುನಾಡು ಸಂಘಟನೆ ಹ್ಯಾಷ್ಟ್ಯಾಗ್ ಎಜ್ಯುಕೇಷನ್ ಅನ್ನುವ ಟ್ವೀಟ್ ಅಭಿಯಾನ ಆಯೋಜಿಸಿದೆ.
ಈ ಸಂಘಟನೆಯು ಈ ಹಿಂದೆ ಭಾರತೀಯ ಸಂವಿಧಾನದ ಎಂಟನೇ ಪರಿಚ್ಚೇದ ತುಳು ಭಾಷೆಯನ್ನು ಸೇರಿಸಲು ಒತ್ತಾಯಿಸಿ ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ನಡೆಸಿತು. ತುಳುವನ್ನು ಕರ್ನಾಟಕ ಮತ್ತು ಕೇರಳದಲ್ಲಿ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡುವ ಬೇಡಿಕೆಯನ್ನು ಕೂಡ ಕೇಳಿಕೊಂಡಿತ್ತು. ಇದೀಗ ಈ ಅಭಿಯಾನದಿಂದ ಜನರಿಗೆ ತುಳು ಲಿಪಿಯನ್ನು ಕಲಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಕೊರೊನಾ ಸಮಸ್ಯೆ ಮುಗಿದ ಬಳಿಕ ಹೊಸ ಶಿಕ್ಷಣ ನೀತಿಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಯೋಜಿಸಿದ್ದು, ಅದರ ಪ್ರಕಾರ ಐದನೇ ತರಗತಿಯವರೆಗಿನ ಮಕ್ಕಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಕಲಿಸಬೇಕಾಗಿದೆ. ಆದ್ದರಿಂದ ಕರಾವಳಿ ಕರ್ನಾಟಕದ ಜನರು ತಮ್ಮ ಮಕ್ಕಳಿಗೂ ತುಳು ಭಾಷೆಯಲ್ಲಿ ಕಲಿಸಬೇಕೆಂದು ಬಯಸುತ್ತಾರೆ.