ಮಂಗಳೂರು, ಏ 27: ಕಾಂಗ್ರೆಸ್ ಸರಕಾರದ ಸಾಧನೆ ಮತ್ತು ಅಭಿವೃದ್ಧಿ ಕಾರ್ಯವನ್ನು ಕಾರ್ಯಕರ್ತರು ಮತದಾರರಿಗೆ ತಿಳಿ ಹೇಳುವ ಮೂಲಕ ಪಕ್ಷದತ್ತ ಒಲವು ತೋರಿಸಬೇಕು ಎಂದು ಶಾಸಕ ಮೊಯ್ದೀನ್ ಬಾವಾ ಹೇಳಿದ್ದಾರೆ.
ಚೊಕ್ಕಬೆಟ್ಟುವಿನಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಕಲ್ಯಾಣಕ್ಕಾಗಿ ಉತ್ತಮ ಯೋಜನೆ ಜಾರಿ ಮಾಡಿದವರು. ಅನ್ನ ಭಾಗ್ಯ, ಕ್ಷೀರ ಭಾಗ್ಯ, ವಸತಿ ಮತ್ತಿತರ ಸೌಲಭ್ಯಗಳು ಬಡ ವರ್ಗಕ್ಕೆ ನೇರವಾಗಿ ತಲುಪುವ ಸೌಲಭ್ಯಗಳಾಗಿವೆ ಎಂದು ಹೇಳಿದರು.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಸರ್ವರಿಗೂ ಉತ್ತಮ ರಸ್ತೆ, ಕುಡಿಯುವ ನೀರು ಮತ್ತಿತರ ಸೌಲಭ್ಯವನ್ನು ಸಿಗುವಂತೆ ಮಾಡಿದ್ದೇನೆ. ಮತದಾರರು ಮುಂದಿನ ಐದು ವರ್ಷದ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕು ಎಂದು ತಿಳಿಸಿದ್ದಾರೆ.
ಹಂಗಾಮಿ ಅಧ್ಯಕ್ಷ ದೀಪಕ್ ಪೂಜಾರಿ, ಶಶಿಧರ್ ಹೆಗ್ಡೆ, ಹರಿನಾಥ್ ಸುರೇಂದ್ರ ಕಾಂಬ್ಳಿ, ಪುರುಷೋತ್ತಮ್ ಚಿತ್ರಾಪುರ, ಸದಾಶಿವ ಶೆಟ್ಟಿ, ಕವಿತಾ ಸನಿಲ್, ಪ್ರತಿಭಾ ಕುಳಾಯಿ, ಶಕುಂತಳಾ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.