ಮಂಗಳೂರು, ಆ. 17 (DaijiworldNews/SM): ಸದ್ಯ ಎಲ್ಲೆಂದರಲ್ಲಿ ಅನ್ ಲೈನ್ ಶಿಕ್ಷಣದ ಮಾತುಗಳೇ ಕೇಳಿ ಬರುತ್ತಿದೆ. ಶಾಲಾ-ಕಾಲೇಜುಗಳು ಬಂದ್ ಆಗಿದ್ದರೂ ಕೂಡ ಆನ್ ಲೈನ್ ಶಿಕ್ಷಣ ಮುಂದುವರೆಸಲಾಗಿದ್ದು, ವಿದ್ಯಾರ್ಥಿಗಳು ಮೊಬೈಲ್, ಟ್ಯಾಬ್, ಕಂಪ್ಯೂಟರ್, ಲ್ಯಾಪ್ ಟಾಪ್ ಮೊರೆ ಹೋಗಿದ್ದಾರೆ.







ಶಿಕ್ಷಣದಲ್ಲಿ ಉಂಟಾಗುವ ಬ್ರೇಕ್ ತಡೆಗೆ, ಶೈಕ್ಷಣಿಕ ವರ್ಷ ಸರಿ ಹೊಂದಿಸುವ ನಿಟ್ಟಿನಲ್ಲಿ ಆನ್ ಲೈನ್ ಶಿಕ್ಷಣ ಜಾರಿಗೊಳಿಸಿರಬಹುದು. ಆದರೆ, ತರಗತಿಯಲ್ಲಿನ ಅನುಭವ ಆನ್ ಲೈನ್ ಮೂಲಕ ಸಿಗುವುದು ಅಸಾಧ್ಯ ಎಂಬುವುದು ವಿದ್ಯಾರ್ಥಿಗಳ ವಾದ. ಆನ್ ಲೈನ್ ಶಿಕ್ಷಣ ಅಂದುಕೊಂಡಷ್ಟು ಪರಿಪೂರ್ಣವಲ್ಲ ಎಂಬುವುದು ಸತ್ಯ. ಆದರೆ, ಆನ್ ಲೈನ್ ಶಿಕ್ಷಣದಲ್ಲೂ ವಿಭಿನ್ನ ಪ್ರಯೋಗಗಳನ್ನು ನಡೆಸಬುಹುದೆಂಬುವುದನ್ನು ಕಾರ್ಕಳದ ಖಾಸಗಿ ಸಂಸ್ಥೆಯೊಂದರ ಶಿಕ್ಷಕ ವರ್ಗ ಮಾಡಿ ತೋರಿಸಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ವಿಭಿನ್ನ ಪ್ರಯತ್ನ ಮಾಡಿರುವ ಶಿಕ್ಷಕದ್ದೇ ಸುದ್ದಿ. ಜೇಸೀಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಶಿಕ್ಷಕಿ ವಂದನಾ ರೈ ಮತ್ತು ಇತರ ಶಿಕ್ಷಕರು ಸೇರಿಕೊಂಡು ಹೊಸತೆಂದು ಪ್ರಯೋಗಕ್ಕೆ ಕೈಹಾಕಿದ್ದಾರೆ. ವಂದನಾ ರೈ ಜೊತೆಗೆ, ಆಶಾ ಗೋಖಲೆ, ರಜನಿ ಮತ್ತು ಶ್ರೀದೇವಿ ಜತೆಯಾಗಿ ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಅವರು ಮಕ್ಕಳಿಗೆ ಇಂಗ್ಲಿಷ್ ಮತ್ತು ಕನ್ನಡ ವರ್ಣಮಾಲೆಗಳನ್ನು ಮತ್ತು ಪಠ್ಯಪುಸ್ತಕಗಳಿಂದ ವಿವಿಧ ಕನ್ನಡ ಹಾಡುಗಳನ್ನು ವೀಡಿಯೋಗಳ ಮೂಲಕ ಕಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋಗಳು ವೈರಲ್ ಆಗುತ್ತಿವೆ. ಆನ್ ಲೈನ್ ಮೂಲಕ ಪಠ್ಯ ವಿದ್ಯಾರ್ಥಿಗಳಿಗೆ ಮನದಟ್ಟಾಗುವ ನಿಟ್ಟಿನಿಂದ ವಿಭಿನ್ನ ಅಭಿವ್ಯಕ್ತಿಗಳನ್ನು ನೃತ್ಯ ಮತ್ತು ಅಭಿನಯದ ಮೂಲಕ ಪ್ರಸ್ತುತಪಡಿಸಿದ್ದಾರೆ.
ವಂದನಾ ಮೂರು ವರ್ಷಗಳಿಂದ ಕಾರ್ಕಳದ ಜೇಸೀಸ್ ಇಂಗ್ಲಿಷ್ ಮಧ್ಯಮ ಶಾಲೆಯಲ್ಲಿ ಪ್ರಿಸ್ಕೂಲ್ ಮಕ್ಕಳಿಗೆ ಕಲಿಸುತ್ತಿದ್ದಾರೆ. ಅವರು ಕಾರ್ಕಳ ಮತ್ತು ಬಜಗೋಳಿಯಲ್ಲಿ ಮಯೂರಿ ನೃತ್ಯ ತರಗತಿಯನ್ನು ಸ್ಥಾಪಿಸಿದ್ದಾರೆ. ವಂದನಾ 10 ವರ್ಷಗಳ ಕಾಲ ಬೆಂಗಳೂರಿನ ಕಿಡ್ಜೀ ಶಾಲೆಯಲ್ಲಿ ನೃತ್ಯ ಬೋಧಕರಾಗಿದ್ದರು. ಅಲ್ಲದೆ, ಖಾಸಗಿ ವಾಹಿನಿಗಳು ನಡೆಸಿದ್ದರು ರಿಯಾಲಿಟಿ ಶೋಗಳನ್ನು ಕೂಡ ಅವರು ಗೆದ್ದಿದ್ದಾರೆ.
ಇನ್ನು ತಮ್ಮ ವಿಭಿನ್ನ ಪ್ರಯೋಗದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, "ಲಾಕ್ ಡೌನ್ ಸಮಯದಲ್ಲಿ, ಮಕ್ಕಳಿಗೆ ಕಲಿಸಲು ಈ ನವೀನ ಪರಿಕಲ್ಪನೆಯೊಂದಿಗೆ ಬರಲು ನಾನು ನಿರ್ಧರಿಸಿದ್ದೇನೆ. ಇದು ಮಕ್ಕಳಿಗೆ ಕಲಿಸಲು ಉತ್ತಮ ಮತ್ತು ಸುಲಭವಾದ ಮಾರ್ಗವಾಗಿದೆ. ಅವರು ಸಹ ಶೀಘ್ರವಾಗಿ ಕಲಿಯುತ್ತಾರೆ ಮತ್ತು ಪರಿಕಲ್ಪನೆಗಳನ್ನು ತೆಗೆದುಕೊಳ್ಳುತ್ತಾರೆ" ಎಂಬುವುದಾಗಿ ಅವರು ದೈಜಿವರ್ಲ್ಡ್ ಗೆ ಪ್ರತಿಕ್ರಿಯಿಸಿದ್ದಾರೆ. "ಶಾಲಾ ದಿನದ ನೃತ್ಯಕ್ಕೂ ನಾನು ಯಾವಾಗಲೂ ವಿಭಿನ್ನ ಆಲೋಚನೆಗಳೊಂದಿಗೆ ಬರುತ್ತೇನೆ. ಜನಸಾಮಾನ್ಯರನ್ನು ತಲುಪಲು ಸೃಜನಶೀಲ ವಿಚಾರಗಳ ಬಗ್ಗೆ ನಾನು ಯೋಚಿಸುತ್ತೇನೆ. ಅದೇ ರೀತಿ, ನನ್ನ ಸಹೋದ್ಯೋಗಿಗಳು ಸಹ ನನ್ನೊಂದಿಗೆ ಕೈಜೋಡಿಸಿ ಮಕ್ಕಳಿಗೆ ಕಲಿಸಲು ನಾನು ಈ ಯೋಜನೆಯನ್ನು ರೂಪಿಸಿದ್ದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕನ್ನಡ ವರ್ಣಮಾಲೆಗಳನ್ನು ಕಲಿಸುವಾಗ, ನಾವು ಬೋರ್ಡ್ಗಳನ್ನು ಬಳಸಿದ್ದೇವೆ ಮತ್ತು ಕಾರ್ಯಗಳನ್ನು ನಿರ್ವಹಿಸುವುದರಿಂದ ಅದು ಮಕ್ಕಳಿಗೆ ಸುಲಭವಾಗಿ ತಲುಪುತ್ತದೆ "ಎಂದು ಅವರು ಹೇಳಿದರು. ಸ್ವಾತಂತ್ರ್ಯ ದಿನಾಚರಣೆಯಂದು ಸಹ, ವಿದ್ಯಾರ್ಥಿಗಳನ್ನು ವಿಶಿಷ್ಟ ರೀತಿಯಲ್ಲಿ ಹಾರೈಸಲು ನಾವು ಮೂರು ವೀಡಿಯೋಗಳನ್ನು ಚಿತ್ರೀಕರಿಸಿದ್ದೇವೆ ಎಂದು ವಂದನಾ ಹೇಳಿದರು.