ಕುಂದಾಪುರ, ಆ. 18 (DaijiworldNews/MB) : ಕೋಡೆರಿ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರ ಪೈಕಿ ಓರ್ವ ಮೀನುಗಾರನ ಮೃತದೇಹ ಸೋಮವಾರ ಬೆಳ್ಳಿಗ್ಗೆ ಪತ್ತೆಯಾಗಿದ್ದು ಮತ್ತೆಉಳಿದ ಮೂವರ ಮೃತದೇಹವು ಸೋಮವಾರ ರಾತ್ರಿ ಪತ್ತೆಯಾಗಿದೆ.

ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿ 7 ಮೀನುಗಾರರನ್ನು ರಕ್ಷಿಸಿದ ಘಟನೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿಯಲ್ಲಿ ರವಿವಾರ ಮಧ್ಯಾಹ್ನ ನಡೆದಿತ್ತು.
ಭಾನುವಾರ ಸಾಗರಶ್ರೀ ಎಂಬ ಮೀನುಗಾರಿಕಾ ನಾಡದೋಣಿಯಲ್ಲಿ ಒಟ್ಟು 11ಮಂದಿ ಮೀನುಗಾರರು ಇದ್ದು ಮೀನುಗಾರಿಕೆಗೆ ತೆರಳಿ ವಾಪಸವಾಗುತ್ತಿದ್ದ ವೇಳೆ ಕೊಡೇರಿ ಸಮೀಪ ಸಮುದ್ರದ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿತ್ತು. ನಿಯಂತ್ರಣ ಕಳೆದುಕೊಂಡ ದೋಣಿ ಕಲ್ಲಿನ ಗೋಡೆಗೆ ಢಿಕ್ಕಿ ಹೊಡೆದು ದೋಣಿ ಪಲ್ಟಿಯಾದ ಪರಿಣಾಮ ನಾಲ್ವರು ಮೀನುಗಾರರು ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಇದೀಗ ಸೋಮವಾರ ಈ ನಾಲ್ವರು ಮೀನುಗಾರರ ಮೃತದೇಹ ಪತ್ತೆಯಾಗಿದೆ. ಇನ್ನು 7 ಮೀನುಗಾರರನ್ನು ಭಾನುವಾರ ರಕ್ಷಿಸಲಾಗಿತ್ತು.
ಸೋಮವಾರ ಬೆಳಿಗ್ಗೆ ಮೀನುಗಾರ ನಾಗ ಖಾರ್ವಿಯ ಮೃತದೇಹ ಕೊಡೇರಿ ಹೊಸ ಇತ್ಲು ಸಮುದ್ರದಲ್ಲಿ ಪತ್ತೆಯಾಗಿದ್ದು ಸೋಮವಾರ ರಾತ್ರಿಯೊಳಗೆ ಮೀನುಗಾರ ಲಕ್ಷ್ಮಣ ಖಾರ್ವಿ ಅವರ ಮೃತದೇಹ ಕಿರಿಮಂಜೇಶ್ವರದ ಆದ್ರಾ ಗೋಳಿಯ ಕಡಲ ತೀರದಲ್ಲಿ, ಶೇಖರ ಖಾರ್ವಿ ಮೃತದೇಹ ಹೊಸಹುತ್ಲು ಬಳಿ ಹಾಗೂ ಮಂಜುನಾಥ ಖಾರ್ವಿ ಮೃತದೇಹ ಗಂಗಿಬೈಲು ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಈ ನಾಲ್ವರು ಮೀನುಗಾರರು ಕೂಡಾ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದರು.
ಇನ್ನು ಮೀನುಗಾರರ ಮೃತದೇಹ ಪತ್ತೆಗಾಗಿ ಡ್ರೋನ್ ಕ್ಯಾಮೆರಾ ಸಹಾಯ ಪಡೆಯಲಾಗಿದೆ ಎಂದು ವರದಿಯಾಗಿದೆ. ಎರಡು ಬ್ರೇಕ್ ವಾಟರ್ಗಳ ಮಧ್ಯೆ ಡ್ರೋನ್ ಕ್ಯಾಮೆರಾವನ್ನು ಹಾರಿಸಿ ಪರಿಶೀಲನೆ ನಡೆಸಲಾಗಿದ್ದು ಆಗ ಒಬ್ಬರ ಮೃತಹೇಹ ಕಾಣಿಸಿಕೊಂಡಿದ್ದು ಅಲೆಗಳ ರಭಸದಿಂದಾಗಿ ಮೇಲಕ್ಕೆ ತರಲು ಆ ಸಂದರ್ಭದಲ್ಲಿ ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗಿದೆ.