ಕಾಸರಗೋಡು, ಆ. 18 (DaijiworldNews/MB) : ಯುವಕನನ್ನು ಕಡಿದು ಕೊಲೆಗೈದ ಘಟನೆ ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಕೊಲೆಗೀಡಾದವರನ್ನು ನಾಯ್ಕಾಪುವಿನ ಹರೀಶ್ (38) ಎಂದು ಗುರುತಿಸಲಾಗಿದೆ.
ಮನೆಯಿಂದ 100 ಮೀಟರ್ ದೂರದ ದಾರಿ ಮಧ್ಯೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರೀಶ್ನನ್ನು ಗಮನಿಸಿದ ಪಾದಚಾರಿಯೋರ್ವರು ಕೂಡಲೇ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕುಂಬಳೆ ಹಾಗೂ ಬಳಿಕ ಕಾಸರಗೋಡು ಖಾಸಗಿ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.
ನಾಯ್ಕಾಪುವಿನ ಆಯಿಲ್ ಮಿಲ್ ವೊಂದರ ಲ್ಲಿ ಕಳೆದ ದುಡಿಯುತ್ತಿದ್ದ ಹರೀಶ್ ರಾತ್ರಿ ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.
ಕುತ್ತಿಗೆ ಹಾಗೂ ತಲೆಗೆ ಬಿದ್ದ ಗಂಭೀರ ಸ್ವರೂಪದ ಪೆಟ್ಟು ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ವೈಯುಕ್ತಿಕ ದ್ವೇಷ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಬೇರೆ ಯಾವುದಾದರೂ ಕಾರಣ ಇರಬಹುದೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕೃತ್ಯದ ಹಿಂದೆ ಯಾರೆಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಹರೀಶ್ 15 ವರ್ಷಗಳಿಂದ ನಾಯ್ಕಾಪುವಿನ ಭಗವತಿ ಅಕ್ಕಿ ಮಿಲ್ ನಲ್ಲಿ ದುಡಿಯುತ್ತಿದ್ದರು. ಕೊಲೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.