ಉಡುಪಿ, ಆ. 18 (DaijiworldNews/MB) : ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ಮುಚ್ಚಲಾಗಿದ್ದ ಅಂಗಡಿಗಳು ಮತ್ತು ಕಂಪನಿಗಳನ್ನು ಮತ್ತೆ ತೆರೆಯಲು ಅನುಮತಿ ನೀಡಬೇಕಾದರೆ ಲಕ್ಷಾಂತರ ರೂಪಾಯಿ ಲಂಚದ ಬೇಡಿಕೆ ಇರಿಸಿದ್ದಾರೆ ಎಂಬ ಕಾಂಗ್ರೆಸ್ನ ಆರೋಪಕ್ಕೆ ಪುಷ್ಟಿ ನೀಡಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಷಾ ನಾಯಕ್ ಅಧಿಕಾರಿಗಳು ಲಂಚದ ಬೇಡಿಕೆ ಇರಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ. ಹಾಗೆಯೇ ಈಗಾಗಲೇ ಸಂಕಷ್ಟದಲ್ಲಿರುವ ಉದ್ಯಮಿಗಳನ್ನು ಈ ಮೂಲಕ ಹತ್ಯೆಗೈಯುವ ಯತ್ನ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ದ ಟ್ವೀಟ್ ಮೂಲಕ ಆರೋಪ ಮಾಡಿದ್ದಾರೆ.


ಇನ್ನು ಶ್ರೀಷಾ ನಾಯಕ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, "ಅಧಿಕಾರಿಗಳು ಜಿಲ್ಲೆಯ ಜನರು ಮುರ್ಖರೆಂದುಕೊಂಡಿದ್ದಾರೆ. ಜಿಲ್ಲೆಯ ಜನರು ಬುದ್ಧಿವಂತರು. ನಮ್ಮಲ್ಲಿ ಐವರು ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾರೆ. ಶ್ರೀಷಾ ನಾಯಕ್ ಮಾಡಿದ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದು ಅವರು ಹೇಳಿದ್ದಾರೆ.
ಇನ್ನು ಈ ಬಗ್ಗೆ ದಾಯ್ಜಿವಲ್ಡ್ ಜೊತೆ ಮಾತನಾಡಿರುವ ಶಾಸಕ ರಘುಪತಿ ಭಟ್, ''ನನಗೆ ತಿಳಿದ ಪ್ರಕಾರವಾಗಿ ಕೊರೊನಾ ಸಂಬಂಧಿಸಿದ ವಿಚಾರದಲ್ಲಿ ಒಂದು ರೂಪಾಯಿ ಕೂಡ ಕೈ ಬದಲಾಗಿಲ್ಲ. ಲಂಚ ಪಾವತಿಸಿದ ದೂರಿನೊಂದಿಗೆ ಯಾರಾದರೂ ಮುಂದೆ ಬಂದರೆ, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು'' ಎಂದು ಹೇಳಿದರು.
"ನನಗೆ ತಿಳಿದ ಮಟ್ಟಿಗೆ, ಇಲ್ಲಿ ಅಂತಹ ಯಾವುದೇ ಘಟನೆಗಳು ಸಂಭವಿಸಿಲ್ಲ. ಜನರು ಈ ಕೆಲಸಕ್ಕಾಗಿ ಒಂದು ರೂಪಾಯಿ ಪಾವತಿಸಿದ್ದರೂ ಸಹ ಅವರು ವೈಯಕ್ತಿಕವಾಗಿ ನನ್ನ ಬಳಿಗೆ ಬಂದು ದೂರು ನೀಡಬಹುದು. ನಾನು ಆ ಬಗ್ಗೆ ಕ್ರಮಕೈಗೊಳ್ಳುವಂತೆ ನೋಡಿಕೊಳ್ಳುತ್ತೇನೆ. ನಾನು ಶ್ರೀಷಾ ನಾಯಕ್ ಅವರೊಂದಿಗೆ ಮಾತನಾಡಿದ್ದೇನೆ. ಲಂಚದ ಬೇಡಿಕೆಯ ಬಗ್ಗೆ ಅವರಿಗೆ ಬೇರೊಬ್ಬರು ತಿಳಿಸಿರುವುದಾಗಿ ಹೇಳಿದ್ದಾರೆ, ಸಂಬಂಧಪಟ್ಟ ವ್ಯಕ್ತಿಯನ್ನು ನನ್ನ ಬಳಿಗೆ ಕರೆತರಬೇಕೆಂದು ನಾನು ವಿನಂತಿಸಿದ್ದೇನೆ. ಆದರೆ ಅವರು ಈವರೆಗೂ ಯಾರನ್ನೂ ಕೂಡಾ ಕರೆತಂದಿಲ್ಲ. ಲಿಖಿತ ದೂರು ನೀಡಿದರೆ, ನಾವು ಕಾನೂನುಬದ್ಧವಾಗಿ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಳ್ಳಲು ಸಾಧ್ಯ. ಇನ್ನು ದೂರುದಾರರು ತಮ್ಮ ಗುರುತನ್ನು ಯಾರಿಗೂ ತಿಳಿಸಲು ಬಯಸದಿದ್ದರೆ ದೂರುದಾರರ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸುವುದಿಲ್ಲ'' ಎಂಬ ಭರವಸೆಯನ್ನು ನೀಡಿದ್ದಾರೆ.