ಬಂಟ್ವಾಳ, ಏ 27: ತರಾತುರಿಯಲ್ಲಿ ವಂದೇ ಮಾತರಂ ದೇಶ ಭಕ್ತಿಗೀತೆಯನ್ನು ಅರ್ಧಕ್ಕೆ ನಿಲ್ಲಿಸಿ ಅಗೌರವ ತೋರಿಸಿದ ಘಟನೆ ಕಾಂಗ್ರೆಸ್ ಸಮಾವೇಶದಲ್ಲಿ ನಡೆದಿದೆ.
ಬಂಟ್ವಾಳದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಯಲ್ಲಿ ವಂದೇ ಮಾತರಂ ದೇಶ ಭಕ್ತಿಗೀತೆಯನ್ನು ಹಾಡಲು ಆರಂಭಿಸಿ, ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗುವ ಹಿನ್ನಲೆ, ತರಾತುರಿಯಲ್ಲಿ ವಂದೇ ಮಾತರಂ ದೇಶ ಭಕ್ತಿಗೀತೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ವಂದೇ ಮಾತರಂ ಹಾಡುತ್ತಿದ್ದ ವೇಳೆ ರಾಹುಲ್ ಗಾಂಧಿ, ಬೇಗ ಹಾಡಿ ಮುಗಿಸಿ, ಒಂದೇ ಲೈನ್ ಸಾಕು ಎಂದು ಸೂಚನೆ ನೀಡಿದ್ದು ಹಾಡನ್ನು ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಸಮಾವೇಶ ಆರಂಭವಾಗುವಾಗ ಸ್ವಲ್ಪತಡವಾಗಿತ್ತು. ಹೀಗಾಗಿ ಕಾಂಗ್ರೆಸ್ ನಾಯಕರು ಬೇಗ ಕಾರ್ಯಕ್ರಮ ಮುಗಿಸುವ ತರಾತುರಿಯಲ್ಲಿದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಇದೀಗ ವಂದೇ ಮಾತರಂ ಗೀತೆ ಎಂದು ಕಾರ್ಯಕ್ರಮ ನಿರೂಪಕರು ಘೋಷಿಸಿದರು. ಈ ವೇಳೆ ಸಮಯ ಕಳೆಯುತ್ತಿದೆ ವಂದೇ ಮಾತರಂ ಗೀತೆ ಬೇಕಾ..? ಎಂದು ರಾಹುಲ್ ಗಾಂಧಿ ವಾಚ್ ತೋರಿಸಿ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಪ್ರಶ್ನಿಸಿದ್ದಾರೆ. ಆಗ ವೇಣುಗೋಪಾಲ್ ಒಂದೆರಡು ಸಾಲು ಹಾಡಿ ಎಂದು ಹಾಡುವವರಿಗೆ ಸೂಚನೆ ನೀಡಿದ್ದಾರೆ. ವೇಣುಗೋಪಾಲ್ ಸೂಚನೆ ಮೇರೆಗೆ ವಂದೇ ಮಾತರಂ ಹಾಡನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ದೇಶ ಭಕ್ತಿಗೀತೆಗೆ ಅವಮಾನಿಸಿರುವ ಈ ಘಟನೆಗೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಹರೀಶ್ ಕುಮಾರ್ ಬಹಿರಂಗ ಸಭೆಯಲ್ಲಿ ವಂದೇ ಮಾತರಂ ದೇಶ ಭಕ್ತಿಗೀತೆಗೆ ಅವಮಾನಿಸಿಲ್ಲ. ಹಾಡನ್ನು ಮೂರು ನಿಮಿಷ ಹಾಡಲಾಗಿದೆ. ವಂದೇ ಮಾತರಂ ಗೀತೆಗೆ ಅಗೌರವ ತೋರಿಸಿಲ್ಲ ಎಂದು ತಿಳಿಸಿದ್ದಾರೆ.