ಕಾರ್ಕಳ, ಆ 18 (Daijiworld News/MSP): ಕಳೆದ ಮೂರು ತಿಂಗಳುಗಳಿಂದ ಮಾಸಿಕ ವೇತನ ಕೈಸೇರದೇ ಬದುಕು ಅತಂತ್ರದಲ್ಲಿದ್ದ ತಾಲೂಕು ಸರಕಾರಿ ಆಸ್ಪತ್ರೆಯ ಹೊರಗುತ್ತಿಗೆ ಕಾರ್ಮಿಕರು ದುಡಿಮೆ ಮೊಟಕುಗೊಳಿಸಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ತಾಲೂಕು ಸರಕಾರಿ ಆಸ್ಪತ್ರೆಯ ಹೊರಗುತ್ತಿಗೆಯನ್ನು ಉಡುಪಿಯ ಗುತ್ತಿಗೆದಾರರೊಬ್ಬರು ವಹಿಸಿಕೊಂಡಿದ್ದರು. 10 ಮಂದಿ "ಡಿ" ಗುಂಪು ನೌಕರರು ಅದೇ ಸಂಸ್ಥೆಯಡಿಯಲ್ಲಿ ದುಡಿಯುತ್ತಿದ್ದರು.
2020 ಮೇ, ಜೂನ್, ಜುಲಾಯಿ ತಿಂಗಳಿನಲ್ಲಿ 10 ಮಂದಿ ಹೊರಗುತ್ತಿಗೆ ಕಾರ್ಮಿಕರ ಖಾತೆಗೆ ಮಾಸಿಕ ವೇತನ ಬಾರದೇ ಹೋದುದರಿಂದ ಅವರೆಲ್ಲರ ಕುಟುಂಬಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಕರೋನಾ ವೈರಸ್ ಸಂಕಷ್ಟದ ದಿನಗಳಲ್ಲೂ ತಮ್ಮ ಕರ್ತವ್ಯ ನಿಷ್ಠೆ ತೋರಿದ ಹೊರಗುತ್ತಿಗೆ ನೌಕರರಿಗೆ ಬದುಕು ಅತಂತ್ರವೆನಿಸಿದೆ. ಅದೇ ಕೆಲಸವನ್ನೇ ಅವಲಂಬಿಸಿಕೊಂಡಿದ್ದ ಅವರೆಲ್ಲರೂ ತಮ್ಮ ಬದುಕು ನಿರ್ವಹಣೆಗಾಗಿ ಪ್ರತಿದಿನದ ದಿನಸಿ ಸಾಮಾಗ್ರಿಗಳನ್ನು ಸಾಲ ರೂಪದಲ್ಲಿ ಪಡೆದುಕೊಂಡು ಅದರ ಮೊತ್ತ ಪಾವತಿಸಲು ಅಸಾಧ್ಯವಾಗಿ ಸಾಲಗಾರರಾಗಿದ್ದಾರೆಂಬ ಅಳಲು ಅವರದಾಗಿದೆ.
ತಮಗಾಗಿರುವ ಅನ್ಯಾಯದ ವಿರುದ್ಧ ಸಿಡಿದೆದ್ದಿರುವ ಹೊರಗುತ್ತಿಗೆ ಕಾರ್ಮಿಕರು ತಮ್ಮ ದುಡಿಮೆಯನ್ನು ಮೊಟಕುಗೊಳಿಸಿ ಪ್ರತಿಭಟನೆ ವ್ಯಕ್ತಸಿದ್ದಾರೆ.
ಜಿಲ್ಲಾಧಿಕಾರಿಯವರು ಮಧ್ಯೆ ಪ್ರವೇಶಿಸಿ ನ್ಯಾಯ ಒದಗಿಸಬೇಕಾಗಿ ಹೊರಗುತ್ತಿಗೆ ಕಾರ್ಮಿಕರು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಕ್ಯಾಷ್ಯನ್: ದುಡಿಮೆಗೆ ತಕ್ಕ ಫಲದೊರಕದೇ ದುಡಿಮೆ ಮೊಟಕುಗೊಳಿಸಿದ ಹೊರಗುತ್ತಿಗೆ ಕಾರ್ಮಿಕರು ತಾಲೂಕು ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.