ಕಾಸರಗೋಡು, ಆ 18 (Daijiworld News/MSP): ಕಾಸರಗೋಡಿನಿಂದ ದಿನಂಪ್ರತಿ ಮಂಗಳೂರಿಗೆ ಪ್ರಯಾಣಿಸುವವರಿಗೆ ಆ.19 ರ ಬುಧವಾರದಿಂದ ತಲಪಾಡಿ ಗಡಿಯಲ್ಲಿ ರಾಜ್ಯ ಸರಕಾರದ ಜವಾಬ್ದಾರಿಯೊಂದಿಗೆ ಆಂಟಿಜನ್ ತಪಾಸಣೆ ನಡೆಸಿ ಪಾಸ್ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಇ , ಚಂದ್ರಶೇಖರನ್ ತಿಳಿಸಿದ್ದಾರೆ.

ಜಿಲ್ಲೆಯ ಉಳಿದ ಗಡಿ ರಸ್ತೆಗಳಲ್ಲಿ ಶೀಘ್ರವೇ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವರು ತಿಳಿಸಿದ್ದಾರೆ . ಪಾಸ್ ಲಭಿಸಿದವರು ಪ್ರತಿ ವಾರಕ್ಕೊಮ್ಮೆ ಆಂಟಿಜನ್ ತಪಾಸಣೆ ನಡೆಸಬೇಕು . ತಪಾಸಣೆ ನಡೆಸಿದ ಕೆಲವೇ ನಿಮಿಷದಲ್ಲಿ ಅಂತಾರಾಜ್ಯ ಸಂಚಾರಕ್ಕೆ ಪಾಸ್ ಲಭಿಸಲಿದೆ. ಹಲವು ಪಕ್ಷಗಳು , ಜನಪ್ರತಿನಿಧಿಗಳು , ಸಂಘ ಸಂಸ್ಥೆಗಳು ಬೇಡಿಕೆ ಮುಂದಿಟ್ಟ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಆರೋಗ್ಯ ಇಲಾಖೆ , ಪೊಲೀಸರ ಸಹಕಾರದೊಂದಿಗೆ ಈ ವ್ಯವಸ್ಥೆ ಕಲ್ಪಿಸಲಾಗುತ್ತಿದೆ .ಜಾಲ್ಸೂರು , ಪೆರ್ಲ , ಪಾಣತ್ತೂರು, ಬೆಳ್ಳೂರು, ಬಂದಡ್ಕ ಹಾಗೂ ಗಡಿ ಪ್ರದೇಶದ ಅಂತಾರಾಜ್ಯ ಸಂಚಾರಕ್ಕೆ ಅನುಕೂಲವಾಗುವಂತೆ ನಿಬಂಧನೆಗ ಳೊಂದಿಗೆ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳ ಗಡಿ ರಸ್ತೆಗಳಲ್ಲಿ ಹಾಕಿದ ಮಣ್ಣು ತೆರವುಗೊಳಿಸಲು ಆದೇಶ ನೀಡಿತ್ತು. ಕರ್ನಾಟಕದಿಂದ ನಿತ್ಯ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲದಿದ್ದರೂ, ಕಾಸರಗೋಡು ಜಿಲ್ಲಾಡಳಿತ ಸಂಚಾರಕ್ಕೆ ನಿರ್ಬಂಧ ಹೇರಿತ್ತು . ಕೆಲ ದಿನಗಳ ಹಿಂದೆ ಯು ಡಿ ಎಫ್ ಹಾಗೂ ಯುವ ಮೋರ್ಚಾ ಕಾರ್ಯಕರ್ತರು ಕೇರಳ ಗಡಿಯ ಮಣ್ಣನ್ನು ತೆರವುಗೊಳಿಸುವ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದರು.
ಕಾಸರಗೋಡಿನ ಸಾವಿರಾರು ಮಂದಿ ಪ್ರಮುಖವಾಗಿ ವ್ಯವಹಾರ, ಕೃಷಿ, ಉದ್ಯೋಗ, ಶಿಕ್ಷಣ, ಆರೋಗ್ಯ ಸಹಿತ ಎಲ್ಲ ವಲಯದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಅವಲಂಬಿಸಿದ್ದು ಗಡಿ ಸಂಚಾರ ನಿರ್ಬಂಧ ಸಾಕಷ್ಟು ಸಮಸ್ಯೆಗೂ ಎಡೆ ಮಾಡಿಕೊಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊರೊನಾ ಆರಂಭದಲ್ಲಿ ಕೇರಳ ಸಂಪರ್ಕ ರಸ್ತೆ ಹೊಂದಿರುವ 21 ರಸ್ತೆಗಳನ್ನು ಮಣ್ಣು ಹಾಕಿ ಮುಚ್ಚಿತ್ತು. ಇದನ್ನು ಪ್ರಶ್ನಿಸಿ ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಸುಪ್ರೀಂ ಕೋರ್ಟ್ ಮೆಟ್ಟಲೇರಿ ಅಂತಾರಾಜ್ಯ ಗಡಿ ರಸ್ತೆ ಮುಚ್ಚುವಂತಿಲ್ಲ ಎಂಬ ಆದೇಶ ನೀಡಿತ್ತು. ಬಳಿಕ ಇದೀಗ ಕಾಸರಗೋಡು ಜಿಲ್ಲಾಡಳಿತವೇ ಇದೀಗ ಸಂಚಾರ ನಿರ್ಬಂಧ ಹೇರಿದೆ. ಬಿಜೆಪಿ ಕಾಸರಗೋಡು ಜಿಲ್ಲಾಸಮಿತಿ ಕೇರಳ ಹೈಕೋರ್ಟ್ಗೆ ಸಂಚಾರ ನಿರ್ಬಂಧ ಪ್ರಶ್ನಿಸಿ ಅರ್ಜಿ ಸಲ್ಲಿಸಿದೆ.
ಕಾಸರಗೋಡು - ಕರ್ನಾಟಕ ನಡುವಿನ ಸಂಚಾರ ನಿರ್ಬಂಧ ಕಾನೂನು , ರಾಜಕೀಯ ಹೋರಾಟಕ್ಕೆ ಕಾರಣವಾಗುತ್ತಿದ್ದು , ಗಡಿ ಜನತೆ ಅಡಕತ್ತರಿಯಲ್ಲಿ ಸಿಲುಕುವಂತಾಗುತ್ತಿದ್ದು , ಇದರಿಂದ ಪೂರ್ಣ ವಾಗಿ ಅಂತಾರಾಜ್ಯ ಸಂಚಾರಕ್ಕೆ ಅನುಮತಿ ನೀಡಬೇಕೆಂಬ ಒತ್ತಡ ತೀವ್ರಗೊಳ್ಳುತ್ತಿದೆ