ಉಡುಪಿ, ಏ 28: ಕರಾವಳಿ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಬಿಜೆಪಿ ಟಿಕೆಟ್ ಆಕಾಂಕ್ಷಿ ಶೀರೂರು ಶ್ರೀಗಳು ಶುಕ್ರವಾರ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.
ಇದೇ ಮಂಗಳವಾರದಂದು ಪಕ್ಷೇತರ ಅಭ್ಯರ್ಥಿಯಾಗಿ ಶ್ರೀಗಳು ನಾಮಪತ್ರ ಸಲ್ಲಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶೀರೂರು ಸ್ವಾಮಿ, ಪ್ರಚಾರವನ್ನೂ ಮಾಡಿರಲಿಲ್ಲ. ಆದರೆ ಬಿಜೆಪಿಯಲ್ಲಿ ಸ್ವಾಮೀಜಿಯ ಈ ನಿರ್ಧಾರ ಆತಂಕ ಸೃಷ್ಟಿ ಮಾಡಿತ್ತು. ಈಗ ಕಣದಿಂದ ಹಿಂದೆ ಸರಿಯುವ ಮೂಲಕ ಶ್ರೀಗಳು ಬಿಜೆಪಿ ಪಕ್ಷಕ್ಕೆ ತುಸು ನೆಮ್ಮದಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶೀರೂರು ಶ್ರೀಗಳು, ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರನ್ನು ಬೆಂಬಲಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಮಾತ್ರವಲ್ಲ, ಮೇ ಒಂದಕ್ಕೆ ಪ್ರಧಾನಿಯವರು ಉಡುಪಿಗೆ ಬರುತ್ತಿದ್ದಾರೆ. ಹೀಗಾಗಿ ತಮ್ಮ ಊರಿಗೆ ಬರುವಾಗ ಅವರ ಧ್ಯೇಯ ಮತ್ತು ಚಿಂತನೆಗಳಿಗೆ ತೊಡಕುಂಟು ಮಾಡಬಾರದು ಎಂಬ ಉದ್ದೇಶದಿಂದ ನಾಮಪತ್ರ ಹಿಂತೆಗೆದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.