ಕಾಸರಗೋಡು, ಆ. 18, (DaijiworldNews/SM): ಜಿಲ್ಲೆಯಲ್ಲಿ ರೋಗ ಲಕ್ಷಣಗಳಿಲ್ಲದ ಕೋವಿಡ್ ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ ನೀಡುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಪ್ರಸ್ತುತ 151 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರ್.ಟಿ.ಪಿ.ಸಿ.ಆರ್., ಆಂಟಿಜೆನ್ ಟೆಸ್ಟ್ ಪಾಸಿಟಿವ್ ಆಗಿದ್ದರೂ, ಯಾವುದೇ ರೋಗ ಲಕ್ಷಣಗಳಿಲ್ಲದ ಕೋವಿಡ್ ರೋಗಿಗಳನ್ನು ತಮ್ಮ ತಮ್ಮ ಮನೆಗಳಲ್ಲೇ ದಾಖಲಾತಿ ನಡೆಸಿ ಚಿಕಿತ್ಸೆ ನೀಡುವ ವಿಧಾನ ಇದೀಗ ಆರಂಭಗೊಂಡಿದೆ. ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಈ ವ್ಯವಸ್ಥೆ ಕಾಸರಗೋಡು ಜಿಲ್ಲೆಯಲ್ಲಿ ಆರಂಭಿಸಲಾಗಿದೆ.
ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ, ಚೆರುವತ್ತೂರು ಗ್ರಾಮಪಂಚಾಯತ್, ಉದುಮಾ, ಪಂಚಾಯತ್ ಗಳಲ್ಲಿ, ನೀಲೇಶ್ವರ ನಗರಸಭಾ ವ್ಯಾಪ್ತಿಯಲ್ಲಿ ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಟೆಲಿ-ಮೆಡಿಸಿನ್ ಸೌಲಭ್ಯ ಮೂಲಕ ಚಿಕಿತ್ಸೆ ಖಚಿತಪಡಿಸಿಕೊಳ್ಳುತ್ತಾರೆ. ಸೋಂಕಿತರು ಎಲ್ಲಾ ಮಾನದಂಡ ಪಾಲಿಸಬೇಕು. ಆಯಾ ಗ್ರಾಮ ಪಂಚಾಯತ್ ಗಳ ವೈದ್ಯಾಧಿಕಾರಿಗಳ ಚಿಕಿತ್ಸಾ ವ್ಯವಸ್ಥೆ ಮಾಡಲಾಗುತ್ತಿದೆ.
ಮನೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗೆ ಆರೋಗ್ಯ ಸಮಸ್ಯೆ ತಲೆದೋರಿದ್ದಲ್ಲಿ ಕೂಡಲೇ ಆಸ್ಪತ್ರೆಗೆ ತಲಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಎ. ವಿ. ರಾಮ ದಾಸ್ ತಿಳಿಸಿದ್ದಾರೆ. ಮಾನಸಿಕ ಸಮಸ್ಯೆ ಉಂಟಾದಲ್ಲಿ ಟೆಲಿ ಕೌನ್ಸಿಲಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಮನೆಗಳ ಬಗ್ಗೆ ವಾರ್ಡ್ ಮಟ್ಟದ ಜಾಗ್ರತಾ ಸಮಿತಿ ನಿಗಾ ಇರಿಸುತ್ತಿದ್ದಾರೆ.