ಮಂಗಳೂರು, ಏ 28: ಕೆಲವರಿಗೆ ಚುನಾವಣೆ ಹತ್ತಿರ ಬರುವಾಗಲೇ ಮಂದಿರ ದೇವಾಲಯಗಳ ನೆನಪಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸಾಧ್ವಿ ಬಾಲಿಕಾ ಸರಸ್ವತಿ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಜೊತೆ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ ದುಷ್ಟ ಶಕ್ತಿಗಳೊಂದಿಗೆ ರಾಷ್ಟ್ರೀಯ ಪಕ್ಷವೊಂದು ಚುನಾವಣೆಗೋಸ್ಕರ ಒಪ್ಪಂದ ಮಾಡಿಕೊಂಡಿರುವುದು ದುರದೃಷ್ಟಕರ. ಈ ಬೆಳವಣಿಗೆ ಮುಂಬರುವ ದಿನಗಳಲ್ಲಿ ಹಿಂದೂಗಳ ಸ್ಥಿತಿ ಏನಾಗಲಿದೆ ಎಂಬುದನ್ನು ಸೂಚಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಗೋಶಾಲೆ ಹಾಗೂ ಮನೆಗಳ ಹಟ್ಟಿಯಿಂದ ಮಾರಕಾಸ್ತ್ರಗಳಿಂದ ಬೆದರಿಸಿ ಗೋವುಗಳನ್ನು ಅಪಹರಿಸಿ ಕಸಾಯಿಖಾನೆಗೆ ಸಾಗಿಸುತ್ತಿರುವುದು ಆತಂಕಕಾರಿ ಪರಿಸ್ಥಿತಿ. ದೇಶದಲ್ಲಿ ಗೋವುಗಳು ಹಾಗೂ ಮಹಿಳೆಯರು ಸುರಕ್ಷಿತವಾಗಿಲ್ಲ. ದೇಶದಲ್ಲಿ ಗೋವುಗಳು ಸುರಕ್ಷಿತ ವಾಗಬೇಕಾದರೆ ಈ ಕೂಡಲೇ ದೇಶಾದ್ಯಂತ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಲವ್ ಜಿಹಾದ್ ಭ್ರೂಣ ಹತ್ಯೆ ಸೇರಿದಂತೆ ಇನ್ನಿತರ ರೀತಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇದನ್ನು ತಡೆಗಟ್ಟುವ ಜವಾಬ್ದಾರಿ ಸರ್ಕಾರಗಳ ಮೇಲಿದೆ ಎಂದು ಹೇಳಿದರು.