ಕೊಪ್ಪಳ, ಏ 28: ವಂದೇ ಮಾತರಂ ದೇಶ ಭಕ್ತಿಗೀತೆ ಹಾಡಲು ಪುರುಸೊತ್ತಿಲ್ಲದ ರಾಹುಲ್ ಗಾಂಧಿ ರಾಜಕೀಯದಲ್ಲಿರಲು ಯೋಗ್ಯ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಿಡಿಕಾರಿದ್ದಾರೆ.
ಯಲಬುರ್ಗಾ ಕ್ಷೇತ್ರದಲ್ಲಿ ಬಿಜೆಪಿ ಪರ ನಡೆಸಿದ ಪ್ರಚಾರ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ವಂದೇ ಮಾತರಂ ದೇಶ ಭಕ್ತಿಗೀತೆ ಹಾಡಲು ಪುರುಸೊತ್ತಿಲ್ಲದ ರಾಹುಲ್ ಗಾಂಧಿ ರಾಜಕೀಯದಲ್ಲಿರಲು ಯೋಗ್ಯ ಅಲ್ಲ. ರಾಹುಲ್ ಹೋದ ಕಡೆಯೆಲ್ಲಾ ಕಾಂಗ್ರೆಸ್ ಸೋಲುತ್ತಿದೆ. ಸೋಲಿನ ಫಲಿತಾಂಶ ಎಲ್ಲಾ ಕಡೆ ಪುನರಾವರ್ತನೆಯಾಗಲಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಕರ್ನಾಟಕದ ವಿಕಾಸ ಆಗಿಲ್ಲ ಬದಲಾಗಿ ಅವರ ವಿಕಾಸ ಆಗಿದೆ. ಸ್ವ ಕ್ಷೇತ್ರದಲ್ಲಿ ಗೆಲ್ಲಲಾಗದವರು ಬಾದಾಮಿಗೆ ಪಲಾಯನ ಮಾಡಿದ್ದಾರೆ. ಅವರು ಬೇರೆಯವರನ್ನು ಹೇಗೆ ಗೆಲ್ಲಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಮೇ 15ರಂದು ಮತ ಎಣಿಕೆ ನಡೆಯುತ್ತದೆ ಮಧ್ಯಾಹ್ನದ ವೇಳೆ ಸಿದ್ದರಾಮಯ್ಯ ಸರ್ಕಾರ ಬಿದ್ದು ಯಡಿಯೂರಪ್ಪ ಸರ್ಕಾರ ಬರುತ್ತದೆ. ಅಧಿಕಾರಕ್ಕೆ ಬಂದ ತಕ್ಷಣ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ ಅಪರಾಧಿಗಳು ಪಾತಾಳದಲ್ಲಿದ್ದರೂ ಹಿಡಿದು ಜೈಲಿಗಟ್ಟಲಾಗುವುದು ಎಂದು ಹೇಳಿದರು.