ಮಂಗಳೂರು, ಆ 19 (DaijiworldNews/HR): ಸೆಂಟ್ರಲ್ ಮಾರುಕಟ್ಟೆಯೂ ಹಳೆಯದಾಗಿದ್ದು ಅಪಾಯಕಾರಿ ಸ್ಥಿತಿಯಲ್ಲಿರುವ ಕಾರಣ ಹಾಗೂ ಕೊರೊನಾ ಸಾಂಕ್ರಮಿಕ ರೋಗದ ಕಾರಣದಿಂದ ವ್ಯಾಪಾರಸ್ಥರು, ತಕ್ಷಣ ಜಿಲ್ಲಾಡಳಿತ ಸುಸಜ್ಜಿತವಾಗಿ ಅವಕಾಶ ಕಲ್ಪಿಸಿರುವ ಬೈಕಂಪಾಡಿ ಮಾರುಕಟ್ಟೆಗೆ ತಮ್ಮ ವ್ಯಾಪಾರ ವಹಿವಾಟು ಸ್ಥಳಾಂತರಗೊಳಿಸಬೇಕು, ಇಲ್ಲವಾದಲ್ಲಿ ಎಪಿಎಂಸಿ ಸಮಿತಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಆ. 19 ರ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಪ್ರಸ್ತುತ ಎಪಿಎಂಸಿ ಕಾಯಿದೆ ಅನುಸಾರ ಲೈಸೆನ್ಸ್ ಪಡೆದು ವ್ಯಾಪಾರ ವಹಿವಾಟು ನಡೆಸುತ್ತಿರುವ ಹಣ್ಣು ಮತ್ತು ತರಕಾರಿ ವ್ಯಾಪಾರ ವ್ಯಾಪಾರವನ್ನು ಕೂಡಲೇ ಬೈಕಂಪಾಡಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಬೇಕು. ಮುಂದಿನ ದಿನಗಳಲ್ಲಿ ಅನಾವಶ್ಯಕ ಕಾನೂನು ಸಮಸ್ಯೆ ಎದುರಾಗದ ರೀತಿಯಲ್ಲಿ ಮತ್ತು ಸೌಹಾರ್ದದಿಂದ ವ್ಯವಹರಿಸಬೇಕು. ಇಲ್ಲವಾದಲ್ಲಿ ಅನಿವಾರ್ಯವಾಗಿ ಕಾನೂನು ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನು ಪ್ರಸ್ತುತ ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ವ್ಯಾಪಾರ ವಹಿವಾಟು ನಡೇಸಲು ಸೆಂಟ್ರಲ್ ಮಾರುಕಟ್ಟೆ ತೀರ ಕಡಿಮೆ ಇರುವುದರಿಂದ ಹಾಗೂ ಮೂಲಭೂತ ಸೌಕರ್ಯ ಕೊರತೆ ಇರುವುದರಿಂದ ಹೆಚ್ಚಿನ ವಾಹನಗಳ ಆಗಮನದಿಂದ ಟ್ರಾಫಿಕ್ ಹೆಚ್ಚಾಗಿ ರೈತರು ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗುವ ಕಾರಣ ಬೈಕಂಪಾಡಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಲು ತಿರ್ಮಾನಿಸಲಾಗಿದೆ.
ಇನ್ನು ಜಿಲ್ಲಾಡಳಿತವು ಹಣ್ಣು ಮತ್ತು ತರಕಾರಿ ವ್ಯಾಪಾರ ವಹಿವಾಟು 4 ತಿಂಗಳ ಹಿಂದೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಿದ್ದು, ಸಮಿತಿಯು ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಈ ವ್ಯಾಪಾರ ವಹಿವಾಟಿಗಾಗಿ ಮೂಲ ಭೂತ ಸೌಕರ್ಯ ಕಲ್ಪಿಸಿರುತ್ತದೆ. ಸುಮಾರು 1 ಕೋಟಿಗಳ ವೆಚ್ಚದಲ್ಲಿ ತುರ್ತಾಗಿ ಅವಶ್ಯವಿರುವ ಕಾಮಗಾರಿ ಕೈಗೊಂಡಿದ್ದು, ವ್ಯಾಪಾರಸ್ಥರಿಗೆ ಲಭ್ಯವಿರುವ 7 ಟನ್ ಸಾಮಾರ್ಥ್ಯದ ಗೋದಾಮುಗಳು ಕಾಯ್ದಿರಿಸಿ ರಸ್ತೆಗಳು, ಚರಂಡಿ, ಬೆಳಕಿನ ವ್ಯವಸ್ಥೆ, ನೀರಿನ ವ್ಯವಸ್ಥೆ, ಶೌಚಾಲಯ ಮುಂತಾದ ಅನೇಕ ಕಾಮಗಾರಿಕೆಗಳನ್ನು ಕೈಗೊಂಡು ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.