ಮಂಗಳೂರು, ಆ. 19 (DaijiworldNews/MB) : ಕೊರೊನಾ ಕಾರಣದಿಂದಾಗಿ ಕೇಂದ್ರ ಮಾರುಕಟ್ಟೆ ಬಂದ್ ಮಾಡಿ ಜಿಲ್ಲಾಡಳಿತ ನೀಡಿರುವ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಶಾಸಕ ಯು ಟಿ ಖಾದರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಆಗಸ್ಟ್ 19 ರ ಬುಧವಾರ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ರಾತ್ರೋರಾತ್ರಿ ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ನಿಷೇಧಿಸಿ ಆದೇಶ ಹೊರಡಿಸುವ ಬದಲಾಗಿ ಸರ್ಕಾರ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಏಪ್ರಿಲ್ 4 ರಂದು ರಾತ್ರೋರಾತ್ರಿ ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ನಿಷೇಧಿಸಿ ರಾತ್ರಿ ಬೆಳಿಗ್ಗೆಯಾಗುವುದರೊಳಗೆ ಅಲ್ಲಿಂದ ಬೈಕಂಪಾಡಿ ಎಪಿಎಂಸಿಗೆ ಸ್ಥಳಾಂತರಗೊಳ್ಳಲು ತಿಳಿಸಿದ್ದಾರೆ. ಭಾರೀ ಮಳೆಯಿಂದಾಗಿ ಎಪಿಎಂಸಿಯಲ್ಲಿ ತೀವ್ರ ಸಮಸ್ಯೆ ಉಂಟಾಗಿದ್ದು, ಇದರಿಂದಾಗಿ ವ್ಯಾಪಾರಿಗಳಿಗೆ ಬಹಳ ಕಷ್ಟ ಉಂಟಾಗಿದೆ. ಬಳಿಕ ಆಗಸ್ಟ್ 13 ರಂದು ಹೈಕೋರ್ಟ್ನಲ್ಲಿದ್ದ ಪ್ರಕರಣವನ್ನು ಮಂಗಳೂರು ಮಹಾನಗರ ಪಾಲಿಕೆ ಹಿಂತೆಗೆದುಕೊಂಡಿದ್ದು ಚಿಲ್ಲರೆ ವ್ಯಾಪಾರಿಗಳು ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ಆರಂಭಿಸಿದ್ದರು'' ಎಂದಿದ್ದಾರೆ.
"ಕೆಲವು ರಾಜಕೀಯ ವ್ಯಕ್ತಿಗಳ ಒಪ್ಪಿಗೆಯಂತೆ ಆದೇಶ ಹೊರಡಿಸಿರುವ ಅಧಿಕಾರಿಗಳನ್ನು ನಾವು ಹೊಂದಿರುವುದು ದುರದೃಷ್ಟಕರ. ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಸರ್ಕಾರವು ಕಾಳಜಿಯನ್ನು ಹೊಂದಿದ್ದರೆ, ಅವರು ಕೇಂದ್ರ ಮಾರುಕಟ್ಟೆಯಲ್ಲಿನ ವ್ಯಾಪಾರಸ್ಥರು ಹಾಗೂ ಬಂದರ್ನಲ್ಲಿರುವ ಮೀನು ಮಾರಾಟಗಾರರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಬೇಕಾಗಿತ್ತು. ಈಗ ಎಪಿಎಂಸಿ ಅಧ್ಯಕ್ಷರು ವ್ಯಾಪಾರಿಗಳು ಎಪಿಎಂಸಿಗೆ ವಾಪಾಸ್ ಬರುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸಿದಾಗ ಅವರು ಯಾಕೆ ಮೌನವಾಗಿದ್ದರು ಎಂದು ಪ್ರಶ್ನಿಸಿರುವ ಅವರು, ವ್ಯಾಪಾರ ಮಾಡುವುದು ಸರ್ಕಾರದ ಕೆಲಸವಲ್ಲ'' ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
''ಎಲ್ಲರಿಗೂ ಪರವಾನಗಿ ನೀಡುವ ಮೂಲಕ ಎಪಿಎಂಸಿಯಲ್ಲಿ ಅಕ್ರಮ ನಡೆಯುತ್ತಿವೆ. ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ಈ ವಿಷಯದ ಬಗ್ಗೆ ತನಿಖೆ ನಡೆಸಬೇಕು. ಕೇಂದ್ರ ಮಾರುಕಟ್ಟೆ ಬಂದ್ ಮಾಡುವ ಬಗ್ಗೆ ನೀಡಿರುವ ಆದೇಶವನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕು. ಆ ಬಗ್ಗೆ ಚರ್ಚೆ ನಡೆಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು'' ಎಂದು ಖಾದರ್ ಅವರು ಆಗ್ರಹಿಸಿದ್ದಾರೆ.
''ಇದು ಆಡಳಿತ ನಡೆಸುವ ರೀತಿಯೇ'' ಎಂದು ಸರ್ಕಾರಕ್ಕೆ ಪ್ರಶ್ನಿಸಿರುವ ಅವರು, ''ಆಡಳಿತ ನಡೆಸಿ ಅನುಭವವಿರುವ ಮೇಯರ್ಗಳು ಇದ್ದಾರೆ. ಸಂಸದರು ಎಲ್ಲಾ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು'' ಎಂದು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಾಜಿ ಮೇಯರ್ ಹರಿನಾಥ್, ಶಶಿಧರ್ ಹೆಗ್ಡೆ ಮತ್ತು ಇತರರು ಉಪಸ್ಥಿತರಿದ್ದರು.