ಮಂಗಳೂರು, ಏ 28: ಟಿಕೆಟ್ ಕೈತಪ್ಪಿರುವ ಮುಖಂಡರಿಗೆ ಸೂಕ್ತ ಜವಾಬ್ದಾರಿ ನೀಡಿ ಅವರ ಹಿತಾಸಕ್ತಿ ಕಾಪಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಲ್ಲವರಿಗೆ ಅನ್ಯಾಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ. ಕೆಲ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ಸಿಗದೇ ಇರುವುದರಿಂದ ನೋವಾಗಿರುವುದು ನಿಜ. ಟಿಕೆಟ್ ಆಕಾಂಕ್ಷಿಗಳು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಟಿಕೆಟ್ ಎಲ್ಲರಿಗೂ ನೀಡಲು ಸಾಧ್ಯವಿಲ್ಲ. ಟಿಕೆಟ್ ಕೈ ತಪ್ಪಿರುವ ನಾಯಕರ ಮನಸ್ಸಿನ ನೋವನ್ನು ಸಮಾಧಾನಪಡಿಸಿ ಸೂಕ್ತ ಸ್ಥಾನಮಾನ ನೀಡಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ಜೊತೆ ಯಾವುದೇ ಅಸಮಾಧಾನ, ವೈಮನಸ್ಸು ಬಿಲ್ಲವರಿಗಿಲ್ಲ. ನಾವೆಲ್ಲರೂ ಒಟ್ಟಾಗಿ ಸೇರಿ ಪಕ್ಷಕ್ಕಾಗಿ, ಪಕ್ಷದ ಗೆಲುವಿಗೆ ದುಡಿಯುತ್ತೇವೆ. ಮಾತ್ರವಲ್ಲ ಸತ್ಯಜಿತ್ ಸುರತ್ಕಲ್ ಪಕ್ಷದ ಗೆಲುವಿಗೆ ದುಡಿಯುವ ಎಲ್ಲಾ ಭರವಸೆಯನ್ನು ನೀಡಿದ್ದಾರೆ. ಪಕ್ಷದಲ್ಲಿ ಅವರಿಗೆ ಉನ್ನತ ಸ್ಥಾನವನ್ನು ನೀಡುವ ಭರವಸೆ ನೀಡಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ನಮ್ಮದು ಎಂದು ಹೇಳಿದ್ದಾರೆ.
ಹಕ್ಕುಪತ್ರ ವಿಚಾರವಾಗಿ ಮಾತನಾಡಿದ ಅವರು, ಬರೀ ಕಾಂಗ್ರೆಸ್ ಮುಖಂಡರು ಮಾತ್ರ ಹಕ್ಕುಪತ್ರ ವಿತರಿಸಿರುವುದಲ್ಲ. ಬಿಜೆಪಿ ಪಕ್ಷದ ನಾಯಕರು ಕೂಡ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿದ್ದಾರೆ ಎಂದು ತಿಳಿಸಿದರು.
ವಂದೇ ಮಾತರಂ ದೇಶ ಭಕ್ತಿಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅಗೌರವ ತೋರಿಸಿದ್ದಾರೆ. ವಂದೇ ಮಾತರಂ ಕೇಳಲು ಪುರುಸೊತ್ತಿಲ್ಲದ ನಾಯಕ ದೇಶದ ಬಗ್ಗೆ ಇನ್ನೆಷ್ಟೂ ಕಾಳಜಿ ತೋರಿಸಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಶಾಲಾ ಮಕ್ಕಳ ಅನ್ನವನ್ನು ಕಸಿದುಕೊಂಡಿದೆ. ಮಕ್ಕಳ ಅನ್ನ ಕಿತ್ತುಕೊಂಡ ಸರ್ಕಾರ ಸಮಾಜವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಸಂದರ್ಭ ಹರಿಕೃಷ್ಣ ಬಂಟ್ವಾಳ, ರುಕ್ಮಯ ಪೂಜಾರಿ, ಜೀತೆಂದ್ರ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.