ಮಂಗಳೂರು, ಏ 28: ಸಿಪಿಎಂ ಅಬ್ಯರ್ಥಿ ಮುನೀರ್ ಕಾಟಿಪಳ್ಳ ಕುಡ್ಸೆಂಪ್ ಕಾಮಗಾರಿಯಲ್ಲಿ ಬೃಹತ್ ಹಗರಣ ನಡೆದಿದೆ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಶಾಸಕ ಜೆ ಆರ್ ಲೋಬೋ ವಿರುದ್ಧ ಅರೋಪ ಮಾಡಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಕುಡ್ಸೆಂಪ್ ಹಗರರಣ ಕುರಿತ ಪ್ರಣಾಳಿಕೆ ಬಿಡುಗಡೆಗೊಳಿಸಿ ಮುನೀರ್ ಕಾಟಿಪಳ್ಳ ಎಡಿಬಿ ಒಂದನೇ ಹಂತ ಮತ್ತು ಎರಡನೇ ಹಂತಗಳಲ್ಲಿ ರೂ. 770 ಕೋಟಿ ಮೊತ್ತದ ಕಾಮಗಾರಿಗಳಲ್ಲಿ ಭಷ್ಟಚಾರ ನಡೆದಿದೆ. ಶಾಸಕರಾದ ಜೆ.ಆರ್.ಲೋಬೊ ಮತ್ತು ಬಿ.ಎ ಮೊಹಿಯುದ್ದೀನ್ ಬಾವ ಇದರಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿಯವರು ಮೌನ ವಹಿಸುವ ಮೂಲಕ ಅಕ್ರಮಕ್ಕೆ ಬೆಂಬಲ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಜೆ.ಆರ್ ಲೋಬೋ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು, ಕುಡ್ಸೆಂಪ್ ಯೋಜನೆಯಲ್ಲಿ ಹಗರಣ ನಡೆದಿದೆ ಎನ್ನುವ ಆರೋಪ ಸುಳ್ಳು. ಇದರಲ್ಲಿ ನಾನು ಭಾಗಿಯಾಗಿದ್ದೇನೆ ಅನ್ನುವ ಸಂಪೂರ್ಣ ಸುಳ್ಳು ಆರೋಪಗಳನ್ನು ಪ್ರತಿಪಕ್ಷಗಳು ಮಾಡುತ್ತಿದೆ. ಈ ಸುಳ್ಳು ಆಪಾದನೆಗಳೆಲ್ಲವೂ ಕಾನೂನುಬಾಹಿರ ಮತ್ತು ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತೆ ಎಂದು ಹೇಳಿದ್ದಾರೆ.
ಕುಡ್ಸೆಂಪ್ ಯೋಜನೆಯಲ್ಲಿ ಹಗರಣ ನಡೆದಿದೆ ಅನ್ನೋದು ಸುಳ್ಳು. ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಎಲ್ಲಾ ದಾಖಲೆಗಳು ಇವೆ. ಮಾಧ್ಯಮವೊಂದರಲ್ಲಿ ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಲಾಗಿದೆ. ನನ್ನ ಆಡಳಿತ ಸಮಯದಲ್ಲಿ ನಡೆದ ಎಲ್ಲಾ ಯೋಜನೆಗಳನ್ನು ಭಾರತ ಸರಕಾರ ಮತ್ತು ರಾಜ್ಯ ಸರಕಾರ ಶ್ಲಾಘಿಸಿದೆ. ಹೀಗಿದ್ದರೂ ಪ್ರತಿಪಕ್ಷಗಳು ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಆರೋಪ ಮಾಡುತ್ತಿರುವವರಿಗೆ ಮಾಹಿತಿ ಕೊರತೆ ಇದೆ. ಯೋಜನೆಯಲ್ಲಿ ಹಗರಣ ನಡೆದಿದೆ ಅನ್ನೋದನ್ನು ನನ್ನ ಕೈಕೆಳಗೆ ದುಡಿದ ಅಧಿಕಾರಿಗಳು ಹೇಳಲಿ. ಆದರೆ ವಿನಾ ಕಾರಣ ಸುಳ್ಳು ಆರೋಪ ಮಾಡಬೇಡಿ. ಈ ರೀತಿ ಆರೋಪ ಮಾಡುವವರ ವಿರುದ್ಧ ನಾನು ಕ್ರಿಮಿನಲ್ ಮೊಕದ್ದಮೆ ದಾಖಲಿಸುವೆ. ಇದು ನನ್ನನ್ನು ಮಾನಸಿಕವಾಗಿ ಕೊಲ್ಲುವ ಹುನ್ನಾರವಾಗಿದೆ ಎಂದು ಶಾಸಕ ಲೋಬೋ ತಿಳಿಸಿದ್ದಾರೆ.