ಮಂಗಳೂರು, ಆ. 19, (DaijiworldNews/SM): ಖಾಸಗಿ ಆಸ್ಪತ್ರೆಯ ವೈದ್ಯರು ಬದುಕಿ ಉಳಿಯುವುದೇ ಇಲ್ಲ ಎಂದು ಕೈಚೆಲ್ಲಿ ಬಿಟ್ಟ ವಿಶೇಷ ಚೇತನ ಮಗುವೊಂದನ್ನು ದ.ಕ. ಜಿಲ್ಲಾ ವೆನ್ಲಾಕ್ ಕೋವಿಡ್ ಆಸ್ಪತ್ರೆಯ ವೈದ್ಯರು ವಿಶೇಷ ಚಿಕಿತ್ಸೆಗೆ ಒಳಪಡಿಸಿ ಕೊರೊನಾ ಸೋಂಕಿನಿಂದ ಗುಣಮುಖಗೊಳಿಸಿದ್ದಾರೆ. ಸೋಂಕಿನಿಂದ ವಾಸಿಯಾದ ಈ ಮಗುವಿನ ಪೋಷಕರು, ಕುಟುಂಬಸ್ಥರು ಆಸ್ಪತ್ರೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದ ಅಪರೂಪದ ಘಟನೆ ನಡೆದಿದೆ.

ನಗರದ ಕೃಷ್ಣಾಪುರದ ವಿಶೇಷ ಚೇತನ ಮಗುವೊಂದಕ್ಕೆ ಕೊರೊನಾ ಸೋಂಕು ತಗುಲಿತ್ತು. ಜೊತೆಗೆ ನ್ಯುಮೋನಿಯಾವೂ ಇದ್ದು, ಆರೋಗ್ಯ ತುಂಬಾ ಹದಗೆಟ್ಟಿತ್ತು. ಮಗುವನ್ನು ತಕ್ಷಣ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಮಗು ಬದುಕಿ ಉಳಿಯುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಕೈಚೆಲ್ಲಿ ಬಿಟ್ಟರಂತೆ.


ಇದರಿಂದ ಕಂಗಾಲಾದ ಕುಟುಂಬದ ಸದಸ್ಯರು ಮಗುವನ್ನು ಅಲ್ಲಿಂದ ಬಿಡುಗಡೆ ಮಾಡಿ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಬಾಸಿತ್ ಅಲಿ ನೇತೃತ್ವದ ವೈದ್ಯರ ತಂಡ ಮಗುವಿಗೆ ಚಿಕಿತ್ಸೆ ನೀಡಲು ಮುಂದಾಯಿತು. ತಂಡದ ಎದುರು ಕಠಿಣ ಸವಾಲುಗಳಿತ್ತು. ಆದರೂ ಈ ಎಲ್ಲಾ ಸವಾಲುಗಳನ್ನು ಸ್ವೀಕರಿಸಿದ ತಂಡ, ಮಗುವಿಗೆ ಕ್ಲಿಷ್ಟಕರ ಚಿಕಿತ್ಸೆ ಆರಂಭಿಸಿತ್ತು.
ವೈದ್ಯರ, ಶುಶ್ರೂಷಕರ ಮಾನವೀಯ ಸೇವೆಯಿಂದ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಇದೀಗ 15 ದಿನಗಳ ಬಳಿಕ ಮಗು ಆಸ್ಪತ್ರೆಯಿಂದ ಬಿಡುಗಡೆಗೊಂಡಿದೆ. ಮಗು ಕೊರೊನಾ ಗೆದ್ದು ಬಂದಿರೋದನ್ನು ಕಂಡ ಕುಟುಂಬದ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಈ ಸಂದರ್ಭ ವೈದ್ಯರು ಮತ್ತು ಮಗುವಿನ ಕುಟುಂಬದ ಸದಸ್ಯರು ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದರು.