ಮಂಗಳೂರು, ಆ 20 (DaijiworldNews/PY): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ತಪಾಸಣೆಯ ಬಳಿಕ ಇದು ಸುಳ್ಳು ಕರೆ ಎಂದು ತಿಳಿದು ಬಂದಿದೆ. ಅಲ್ಲದೇ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್ ವಾಸುದೇವ ಅವರಿಗೆ ಬುಧವಾರ ಮಧ್ಯಾಹ್ನದ ಸುಮಾರಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಕೂಡಲೇ ಅವರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣವನ್ನು ಸಂಪೂರ್ಣ ತಪಾಸಣೆ ಮಾಡಲಾಗಿದ್ದು, ತಪಾಸಣೆಯ ಸಂದರ್ಭ ಯಾವುದೇ ಶಂಕಿತ ವಸ್ತು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬೆದರಿಕೆ ಕರೆ ಎನ್ನುವ ತೀರ್ಮಾನಕ್ಕೆ ಬಂದಿದ್ದು, ಈ ವಿಚಾರವಾಗಿ ಏರ್ ಪೋರ್ಟ್ ಅಧಿಕಾರಿಗಳು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಜನವರಿ ತಿಂಗಳಲ್ಲಿ ಆದಿತ್ಯ ರಾವ್ ಎಂಬಾತ ವಿಮಾನ ನಿಲ್ದಾಣದಕ್ಕೆ ಬೆದರಿಕೆ ಕರೆ ಹಾಕಿದ್ದ. ಆತ ಇರಿಸಿದ್ದ ಸ್ಫೋಟಕ ಪತ್ತೆಯಾದ ಬಳಿಕ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಬಳಿಕ ಆತನನ್ನು ಬಂಧಿಸಿದ್ದರು.