ಮಂಗಳೂರು, ,ಆ 20 (Daijiworld News/MSP): "ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ನೈಜ ಆರೋಪಿಯ ಪತ್ತೆ ಹಚ್ಚುವ ಬದಲು ಸರ್ಕಾರ ಅಮಾಯಕರನ್ನ ಬಂಧಿಸುತ್ತಿದೆ. ಈ ಮೂಲಕ ನೈಜ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ" ಎಂದು ಶಾಸಕ ಯು.ಟಿ ಖಾದರ್ ಆರೋಪಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿ ಸರ್ಕಾರದ ವಿರುದ್ದ ಕಿಡಿಕಾರಿರುವ ಶಾಸಕ ಖಾದರ್ " ಸರ್ಕಾರದ ಭಯ ಇದ್ರೆ ಡಿ.ಜೆ ಹಳ್ಳಿ , ಕೆ.ಜಿ ಹಳ್ಳಿಯಲ್ಲಿ ಪುಂಡರು ಈ ರೀತಿ ವರ್ತಿಸುತ್ತಿರಲಿಲ್ಲ.ಇದು ಸರ್ಕಾರದ ವೈಫಲ್ಯವಲ್ಲದೆ ಮತ್ತೇನು?" ಎಂದು ಪ್ರಶ್ನಿಸಿದ್ದಾರೆ.
"ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಶಾಸಕ ತನ್ವೀರ್ ಸೇಠ್ ಮೇಲಿನ ಮಾರಣಾಂತಿಕ ಹಲ್ಲೆ ತಡೆಯಲಾಗಲಿಲ್ಲ. ಆರೋಪಗಳಿನ್ನೂ ಪತ್ತೆ ಹಚ್ಚಲಾಗಲಿಲ್ಲ. ಪ್ರವಾದಿಗೆ ನಿಂದಿಸಿದ ವ್ಯಕ್ತಿ ಪಕ್ಕದಲ್ಲೇ ಇದ್ದರು ಬಂದಿಸಲಿಲ್ಲ. ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಬೀಳೋ ತನಕ,ಪೋಲಿಸ್ ಠಾಣೆ ಸುಟ್ಟು ಬೂದಿಯಾಗೋ ತನಕ, ಪೋಲಿಸರು ಏನೂ ಮಾಡಿಲ್ಲ, ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆಯಾದ ಪ್ರಕರಣದ ಕಥೆ ಏನಾಯ್ತು ಗೊತ್ತಿಲ್ಲ,ಮಂಗಳೂರು ಗಲಭೆಗೆ ಕೇರಳದಿಂದ ಬಂದವರು ಕಾರಣ ಎಂದಿದ್ದೀರಿ,ಹಾಗಿದ್ದರೆ ಒಬ್ಬ ಕೇರಳಿಗರನ್ನ ಏಕೆ ಬಂದಿಸಿಲ್ಲ" ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜಕೀಯದ ಕೆಸರೆರಚಾಟ ಮಾಡುವ ಬದಲು ಸಮಾಜಘಾತುಕ ಶಕ್ತಿ ಯಾರೇ ಇರಲಿ ಅವರನ್ನ ಮಟ್ಟ ಹಾಕಿ ನಿಮ್ಮ ಬದ್ದತೆಯನ್ನ ತೋರಿಸಿ.ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ ಅಧಿಕಾರದಲ್ಲಿ ಕುಳಿತು ಇನ್ನೊಬ್ಬರ ಮೇಲೆ ಬೆರಳು ತೋರಿಸುವುದೇ ನಿಮ್ಮ ಸ್ವರ್ಣಯುಗವೇ? ಬಂಧಿಸಿದ ನಿರಪರಾಧಿಗಳಿಗೆ ಮುಕ್ತಿ ನೀಡಿ, ನೈಜ ಅಪರಾಧಿಯನ್ನ ಶಿಕ್ಷಿಸಿ,ಸಮಾಜವನ್ನ ರಕ್ಷಿಸಿ ಎಂದು ಮತ್ತೊಂದು ಟ್ವೀಟ್’ ನಲ್ಲಿ ಹೇಳಿದ್ದಾರೆ.