ಮಂಗಳೂರು, ಆ. 20(DaijiworldNews/HR): ಅನೇಕ ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಅವರ ಕೂದಲೆಂದರೆ ಅಚ್ಚುಮೆಚ್ಚು. ಅದರಲ್ಲಿ ಕೆಲವರು ತಮ್ಮ ಕೂದಲನ್ನು ಬ್ಯೂಟಿ ಪಾರ್ಲರ್ ಗಳಲ್ಲಿ ಕತ್ತರಿಸಿ ಎಸೆದು ವ್ಯರ್ಥಮಾಡಿದರೆ ಮತ್ತೆ ಕೆಲವರು ತಮ್ಮ ಕೂದಲು ದಾನ ಮಾಡಿ ಸಮಸ್ಯೆಯಲ್ಲಿರುವ ಮಹಿಳೆಯರ ಅಥವಾ ಮಕ್ಕಳ ಮುಖದಲ್ಲಿ ಮಂದಹಾಸವನ್ನು ತರುತ್ತಾರೆ.


ಅದೇ ರೀತಿ ಶಕ್ತಿನಗರ ನಿವಾಸಿ ರೇಷ್ಮಾ ರಾಮದಾಸ್ ಅವರು ಕ್ಯಾನ್ಸರ್ ಪೀಡಿತ ಮಹಿಳೆಯ ಮುಖದಲ್ಲಿ ಮಂದಹಾಸ ಮೂಡಿಸಲು ತನ್ನ ಸುಂದರವಾದ ಕೂದಲನ್ನು ದಾನ ಮಾಡಿದ್ದಾರೆ.
ಈ ಬಗ್ಗೆ ಡೈಜಿವರ್ಲ್ಡ್ ಜೊತೆ ಮಾತನಾಡಿದ ರೇಷ್ಮಾ, ''ಎರಡು ವರ್ಷಗಳ ಹಿಂದೆ, ನನ್ನ ಸ್ನೇಹಿತೆ ತನ್ನ ಕೂದಲನ್ನು ದಾನ ಮಾಡಿದ್ದಳು, ಅವಳನ್ನು ನೋಡಿ ಪ್ರೇರಣೆಗೊಂಡು ನಾನು ಕೂಡ ಕೂದಲು ದಾನ ಮಾಡಿದ್ದೇನೆ. ಆದರೆ ನಾವು ಕೂದಲನ್ನು ಹೇಗೆ ದಾನ ಮಾಡಬಹುದು ಮತ್ತು ಯಾರನ್ನು ಸಂಪರ್ಕಿಸಬೇಕು ಎಂದು ನನಗೆ ತಿಳಿದಿರಲಿಲ್ಲ. ನನ್ನ ಕೂದಲು ಉದ್ದ ಇರುವುದರಿಂದ ದಾನ ಮಾಡಲು ಬಯಸುತ್ತಿದ್ದೆ. ನನ್ನ ಪತಿ ರಾಮದಾಸ್ ಅವರು ಹೇರ್ ಬ್ಯಾಂಕ್ ಅನ್ನು ಶಿಫಾರಸು ಮಾಡಿದರು, ಇದು ನನ್ನ ಕೂದಲನ್ನು ದಾನ ಮಾಡಲು ಒಂದು ಸುವರ್ಣಾವಕಾಶವಾಗಿತ್ತು, ಇದಕ್ಕಾಗಿ ನಾನು ಸಂತೋಷದಿಂದ ಒಪ್ಪಿಕೊಂಡೆ.
'ಕ್ಯಾನ್ಸರ್ ರೋಗಿಗಳಿಗೆ ನಾವು ಏನನ್ನಾದರೂ ನೀಡಿದಾಗ ಅವರು ಹೇಗೆ ಸಂತೋಷ ಪಡುತ್ತಾರೆ ಎಂಬ ವೀಡಿಯೊಗಳನ್ನು ನಾನು ನೋಡಿದ್ದೆ. ಹೀಗಾಗಿ ನನ್ನ ಕೂದಲನ್ನು ತ್ರಿಶೂರ್ನಲ್ಲಿರುವ ಹೇರ್ ಬ್ಯಾಂಕ್ಗೆ ದಾನ ಮಾಡಲು ನಿರ್ಧರಿಸಿದೆ. ಈ ನಿರ್ಧಾರದಲ್ಲಿ ನನ್ನ ಪತಿ ನನ್ನನ್ನು ಬೆಂಬಲಿಸಿದರು. ಕ್ಯಾನ್ಸರ್ ರೋಗಿಯ ಮುಖದಲ್ಲಿ ಮಂದಹಾಸವನ್ನು ತರುವುದಕ್ಕಾಗಿ ನನ್ನ ಕೂದಲನ್ನು ದಾನ ಮಾಡಿರುವುದರಿಂದ ನಾನು ತುಂಬಾ ಖುಷಿಪಟ್ಟಿದ್ದೇನೆ ಎಂದು ರೇಷ್ಮಾ ತಿಳಿಸಿದ್ದಾರೆ.